ಬೆಳಗಾವಿ: ನಮ್ಮ ಕೆಲವು ಮಂತ್ರಿಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಹೆದರಿಸುತ್ತಿದ್ದಾನೆ. ನೀನು ಬರ್ತೀಯೋ ಅಥವಾ ಸಿಡಿ (CD) ಬಿಡುಗಡೆ ಮಾಡಲೋ ಎಂದು ಹೆದರಿಸುತ್ತಿದ್ದಾನೆ. ಇಂದು ನಮ್ಮ ಪಕ್ಷಕ್ಕೆ ಬಾಂಬೆಯಿಂದ ಬಂದವರಿಗೆ ಸಿಡಿ ಬಿಡುತ್ತೇನೆ ನೋಡು ಬಾ ಎಂದು ಬೆದರಿಕೆ ಹಾಕುತ್ತಿದ್ದಾನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಗಂಭೀರ ಆರೋಪ ಮಾಡಿದ್ದಾರೆ.
ಗೋಕಾಕ್ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಕಳೆದ 2 ವರ್ಷಗಳಿಂದ ಮಹಾನಾಯಕ ಸಿಡಿ ಇಟ್ಟುಕೊಂಡು ಕುಳಿತಿದ್ದಾನೆ. ಅದು ನಿಜ ಆಗಿದ್ದರೆ ಆಗಲೇ ಬಿಡುಗಡೆ ಮಾಡಬೇಕಿತ್ತು. ಈಗ ಎಲೆಕ್ಷನ್ ಸಂದರ್ಭದಲ್ಲಿ ಏಕೆ? ಲಿಂಗಾಯತ, ಮುಸ್ಲಿಂ, ಎಸ್ಸಿ ಸಮುದಾಯದವರನ್ನು ಎತ್ತಿಕಟ್ಟಲು ಕುತಂತ್ರ ಮಾಡುತ್ತಿದ್ದಾನೆ. ಡಿಕೆಶಿ ಉದ್ದೇಶ ಅದೇ, ಅವನಿಗೆ ಬೇರೆ ದಾರಿಯೇ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ನನ್ನ ಮಗ ಅಮರನಾಥ ಬಳಿ ಅವನು ಸ್ಪಷ್ಟವಾಗಿ ಹೇಳಿದ್ದಾನೆ. ನನ್ನ ಸಿಡಿ ಕೇಸ್ ಆದಾಗ ಆತನ ಉದ್ಯೋಗ ಅದೇ ಎಂದು ಸ್ಪಷ್ಟವಾಗಿ ಹೇಳಿದ್ದಾನೆ. ಬೇಕಾದರೆ ನನ್ನ ಮಗನ ಕರೆದೊಯ್ದು ಸುಳ್ಳೋ ನಿಜವೋ ಎಂಬುದನ್ನು ಲಕ್ಷ್ಮಿದೇವಿ ಮೇಲೆ ಆಣೆ ಮಾಡಿಸಿ. ಹೀಗಾದರೆ ನಾನು ಏನು ಮಾಡಲು ಸಾಧ್ಯ? ಯುದ್ಧ ಮಾಡೋಣ ಬಾ, ಬೇಕಾದಷ್ಟು ಗಟ್ಟಿ ಇದ್ದೇನೆ. ಕನಕಪುರಕ್ಕೆ ಬಾ ಎಂದರೆ ಅಲ್ಲಿಯೇ ಬರುತ್ತೇನೆ ಬಾ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ರಮೇಶ್ ಜಾರಕಿಹೊಳಿ ಬಹಿರಂಗ ಸವಾಲು ಹಾಕಿದರು.
ನೂರು ಸಿಡಿ ಬರಲಿ, ನಾನು ಗಟ್ಟಿ ಇದ್ದೇನೆ. ನಮ್ಮ ಕೆಲವು ಮಂತ್ರಿಗಳಿಗೆ ಹೆದರಿಸುತ್ತಿದ್ದಾನೆ. ನೀ ಬರ್ತಿಯೋ, ಬಿಡುಗಡೆ ಮಾಡಲೋ ಎಂದು ಹೆದರಿಸುತ್ತಿದ್ದಾನೆ. ಇಂದು ನಮ್ಮ ಪಕ್ಷಕ್ಕೆ ಬಾಂಬೆಯಿಂದ ಬಂದವರಿಗೆ ಬಿಡುತ್ತೇನೆ ನೋಡು ಅಂತ ಹೆದರಿಸುತ್ತಿದ್ದಾನೆ ಎಂದು ಪರೋಕ್ಷವಾಗಿ ಸಚಿವ ನಾರಾಯಣಗೌಡರ ವಿಚಾರವನ್ನು ರಮೇಶ್ ಜಾರಕಿಹೊಳಿ ಪ್ರಸ್ತಾಪ ಮಾಡಿದ್ರಾ? ಎಂಬ ಅನುಮಾನ ಹುಟ್ಟಿದೆ.
ನಾನು ಗಟ್ಟಿ ಇದ್ದೀನಿ, ನಮ್ಮ ಅಣ್ಣತಮ್ಮಂದಿರು, ನನ್ನ ಧರ್ಮಪತ್ನಿ ನನ್ನ ಜೊತೆಗಿದ್ದಾರೆಂದು ಅಂಜಲಿಲ್ಲ. ಸಿಡಿ ಪಾರ್ಟ್ನರ್ ಬೆಳಗಾವಿಯಲ್ಲಿ ಇದ್ದಾರೆ. ಅದಕ್ಕೆ ಹುಷಾರಾಗಿ ಇರಬೇಕು. ಮತ್ತೊಬ್ಬ ಡ್ರೈವರ್ ಈಗ ಕೂಡಿದ್ದಾನೆ. ಡ್ರೈವರ್ ಹಾಗೂ ಮಾಲೀಕ ಕೂಡಿದ್ದಾರೆ ಎಂದು ಪರೋಕ್ಷವಾಗಿ ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜಾರಕಿಹೊಳಿ ಯುದ್ಧ ಮಾಡೋರು, ಷಡ್ಯಂತ್ರ ಮಾಡುವ ಮಂದಿ ಅಲ್ಲ. ನಾನು ಯಾರ ವೈಯಕ್ತಿಕ ಜೀವನ ಮುಟ್ಟಲ್ಲ. ನನ್ನ ಕಡೆ ಸಾಕ್ಷಿ ಇದೆ. ಆದರೆ ನಾನು ಬಿಡುಗಡೆ ಮಾಡಲ್ಲ. ಅವನ ಪತ್ನಿಯೂ ನನ್ನ ತಂಗಿ, ಅವರ ಹಾಗೇ ಮನೆ ಮುರಿಯೋದು ಬೇಡ. ನನಗೊಬ್ಬನಿಗೆ ಕಷ್ಟ ಆಗಿದೆ, ನಾನು ಹೊರಬಂದಿದ್ದೇನೆ. ಬೇರೆ ಯಾರಿಗೂ ಈ ರೀತಿ ಆಗಬಾರದು ಎಂಬುದು ನನ್ನ ಉದ್ದೇಶವಾಗಿದೆ. ಇಂತಹ ಮನುಷ್ಯನ ಕೈಯಲ್ಲಿ ಅಕಸ್ಮಾತ್ ತಪ್ಪಿ ರಾಜ್ಯ ಸಿಕ್ಕರೆ ಪರಿಸ್ಥಿತಿ ಏನಾಗುತ್ತೆ? ಟೋಲ್ಗಳು ಇದ್ದ ಹಾಗೇ ಮತ್ತೊಂದು ಡಿಕೆಶಿ ಟೋಲ್ ಬರುತ್ತದೆ ಎಂದು ಕಿಡಿಕಾರಿದರು.