ದಿಸ್ಪುರ್: ವಧು-ವರರು ಕೊನೇ ಕ್ಷಣದಲ್ಲಿ ಮದುವೆಯನ್ನು (Marriage) ರದ್ದು ಮಾಡುವಂತಹ ಅದೆಷ್ಟೋ ಘಟನೆಗಳುನಡೆಯುತ್ತಲೇ ಇರುತ್ತವೆ. ಮದುವೆ ಮಂಟಪದಲ್ಲಿಯೇ ಭಿನ್ನಾಭಿಪ್ರಾಯಗಳು ಉಂಟಾಗಿ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದು, ಸಂಬಂಧಗಳು ಮುರಿದೂ ಬೀಳುತ್ತವೆ. ಇಲ್ಲೊಬ್ಬ ವರ (Groom) ಕಂಠಪೂರ್ತಿ ಕುಡಿದು (Drunk) ಬಂದು ಮಂಟಪದಲ್ಲೇ ಮಲಗಿಬಿಟ್ಟ ಅಂತ ವಧು (Bride) ಮದುವೆ ಕ್ಯಾನ್ಸಲ್ ಮಾಡಿರುವ ಘಟನೆ ನಡೆದಿದೆ.
ಅಸ್ಸಾಂನ (Assam) ನಲ್ಬರಿ ಜಿಲ್ಲೆಯಲ್ಲಿ ವರನೊಬ್ಬ ಮದ್ಯ ಸೇವಿಸಿ, ತನ್ನ ಮದುವೆಯ ವೇಳೆಯೇ ಮಂಟಪದಲ್ಲಿ ಮಲಗಿಬಿಟ್ಟಿದ್ದಾನೆ. ಪಂಡಿತರು ಹೇಳಿಕೊಡುತ್ತಿರುವ ಮಂತ್ರವನ್ನು ತನ್ನ ಬಾಯಿಂದ ಹೇಳಲೂ ಸಾಧ್ಯವಾಗದೇ ಆತ ಅಲ್ಲೇ ಮಲಗಿಬಿಟ್ಟಿದ್ದಾನೆ. ಇದರಿಂದ ವಧು ತನ್ನ ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾಳೆ.
ವರನನ್ನು ನಲ್ಬರಿ ನಗರದ ನಿವಾಸಿ ಪ್ರಸೇನಜಿತ್ ಹಲೋಯ್ ಎಂದು ಗುರುತಿಸಲಾಗಿದೆ. ಮದುವೆ ಕಾರ್ಯಕ್ರಮಗಳು ಎಲ್ಲವೂ ಚೆನ್ನಾಗಿಯೇ ನಡೆಯುತ್ತಿತ್ತು. ನಮ್ಮ ಕಡೆಯಿಂದ ಎಲ್ಲಾ ವಿಧಿವಿಧಾನಗಳನ್ನು ಅಚ್ಚುಕಟ್ಟಾಗಿ ಮಾಡಿದ್ದೇವೆ. ನಾವು ಮದುವೆ ಕಾರ್ಯಕ್ರಮಗಳನ್ನು ಚೆನ್ನಾಗಿಯೇ ನೆರವೇರಿಸಲು ಪ್ರಯತ್ನಿಸಿದ್ದೇವೆ. ಆದರೆ ವರ ಕಂಠಪೂರ್ತಿ ಕುಡಿದು ಮಂಟಪದಲ್ಲಿಯೇ ಮಲಗಿಬಿಟ್ಟಿದ್ದರಿಂದ ಮದುವೆ ರದ್ದುಗೊಳಿಸಲು ನಿರ್ಧರಿಸಬೇಕಾಯಿತು ಎಂದು ವಧುವಿನ ಕಡೆಯವರು ತಿಳಿಸಿದ್ದಾರೆ.
ವರ ಕುಡಿದ ನಶೆಯಲ್ಲಿ ತೂರಾಡುವುದನ್ನು ಕಂಡು ವಧು ಮಂಟಪದಲ್ಲಿ ಕುಳಿತುಕೊಳ್ಳಲು ನಿರಾಕರಿಸಿದ್ದಾಳೆ. ಬಳಿಕ ವರ ಮಂತ್ರಗಳನ್ನು ಉಚ್ಛರಿಸಲಾಗದೇ ಮಲಗಿದ್ದಾನೆ. ವರನ ಕಡೆಯವರು ಹೆಚ್ಚಿನ ಮಂದಿ ಕುಡಿದುಕೊಂಡೇ ಮದುವೆಗೆ ಬಂದಿದ್ದರು. ಬಳಿಕ ಮದುವೆಯನ್ನು ಕ್ಯಾನ್ಸಲ್ ಮಾಡಿ, ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದೆವು ಎಂದು ತಿಳಿಸಿದ್ದಾರೆ. ಲಕ್ಷಾಂತರ ರೂ. ಖರ್ಚು ಮಾಡಿ ವಧುವಿನ ಕಡೆಯವರು ಮದುವೆಯ ಕಾರ್ಯಕ್ರಮಗಳನ್ನು ಸಿದ್ಧಪಡಿಸಿದರೆ, ವರನ ಕಡೆಯವರು ಈ ರೀತಿ ಮದ್ಯ ಸೇವಿಸಿ ಅವಮಾನ ಮಾಡಿದ್ದಾರೆ. ನಲ್ಬರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದ್ದು, ಮದುವೆಗೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.