ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದ್ದ ರೇವ್ ಪಾರ್ಟಿ ಪ್ರಕರಣದಲ್ಲಿ ಭಾಗಿಯಾಗಿದ್ದ ತೆಲುಗು ನಟಿ ಹೇಮಾ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಬೆನ್ನಲ್ಲೇ ನಟಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ತೆಲುಗು ಕಲಾವಿದರ ಸಂಘದಿಂದ ಹೇಮಾ ಅವರನ್ನು ಕೈ ಬಿಡುವ ಕುರಿತು ಮಾತುಕತೆ ನಡೆಯುತ್ತಿದೆ.
ಬೆಂಗಳೂರಿನಲ್ಲಿ ನಡೆದ ರೇವ್ ಪಾರ್ಟಿ ವಿಚಾರ ಸುದ್ದಿಯಾಗುತ್ತಿದ್ದಂತೆ ನಟಿ ನಾನಾ ರೀತಿಯಲ್ಲಿ ನಾಟಕ ಶುರು ಮಾಡಿದ್ದರು. ಬೆಂಗಳೂರಿನಲ್ಲಿ ಇದ್ದು ಕೊಂಡೆ ಹೈದರಾಬಾದ್ ನಲ್ಲಿ ಇರೋದಾಗಿ ವಿಡಿಯೋ ಮಾಡಿ ಶೇರ್ ಮಾಡಿದ್ದರು. ಜೊತೆಗೆ ಪೊಲೀಸರನ್ನು ಯಾಮಾರಿಸಲು ನಟಿ ಮುಂದಾಗಿದ್ದಾರೆ. ಆದರೆ ಇದೀಗ ಹೇಮಾ ಪಾರ್ಟಿಯಲ್ಲಿ ಭಾಗಿಯಾಗಿದ್ದು ಕನ್ಪಾರ್ಮ್ ಆಗಿದೆ. ಈ ಮಧ್ಯೆ ತೆಲುಗು ಕಲಾವಿಧರ ಸಂಘದಿಂದ ಹೇಮಾ ಅವರನ್ನು ಅಮಾನತುಗೊಳಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.
ಇತ್ತೀಚೆಗೆ ಮಂಚು ವಿಷ್ಣು ಅವರು, ಹೇಮಾ ಅವರು ತಪ್ಪು ಮಾಡಿದ್ದನ್ನು ಪೊಲೀಸರು ಸಾಬೀತುಪಡಿಸಿದರೆ ಖಂಡಿತಾ ಕಲಾವಿದರ ಸಂಘದಿಂದ ಹೇಮಾ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು. ಸದ್ಯದ ಮಾಹಿತಿ ಪ್ರಕಾರ, ಹೇಮಾ ಅವರ ವೈದ್ಯಕೀಯ ಪರೀಕ್ಷೆಯಲ್ಲಿ ಡ್ರಗ್ಸ್ ಸೇವನೆ ಸಾಬೀತಾಗಿದೆ. ಆ ಕಾರಣದಿಂದಲೇ ಹೇಮಾ ಅವರನ್ನು ಬಂಧಿಸಿ ವಿಚಾರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೇಮಾರನ್ನು ಕಲಾವಿದರ ಸಂಘದಿಂದ ಅಮಾನತು ಮಾಡುವ ಬಗ್ಗೆ ಚರ್ಚೆ ನಡೆದಿದೆ. ಆದರೆ ಈ ಬಗ್ಗೆ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.
ನಟಿ ಹೇಮಾ ಇದುವರೆಗೂ ಸುಮಾರು 250 ಚಿತ್ರಗಳಲ್ಲಿ ನಟಿಸಿದ್ದಾರೆ. ಸ್ಟಾರ್ ನಟರ ಚಿತ್ರಗಳಲ್ಲಿ ಪೋಷಕ ನಟಿಯಾಗಿ ಬಣ್ಣ ಹಚ್ಚಿದ್ದಾರೆ. ಪುನೀತ್ ರಾಜ್ಕುಮಾರ್ ನಟನೆಯ ಪವರ್ ಚಿತ್ರದಲ್ಲೂ ಕಾಣಿಸಿಕೊಂಡಿದ್ದರು.