ದೆಹಲಿ ವಿಮಾನ ನಿಲ್ದಾಣದಲ್ಲಿ ನಟಿ ಹಾಗೂ ನೂತನ ಸಂಸದೆ ಕಂಗನಾ ರಾಣವತ್ ಅವರಿಗೆ ಮಹಿಳಾ ಸಿಬ್ಬಂದಿ ಕಪಾಳ ಮೋಕ್ಷ ಮಾಡಿದ್ದರು. ಘಟನೆಯ ಬಳಿಕ ವಿಡಿಯೋ ಮೂಲಕ ಪ್ರತಿಕ್ರಿಯಿಸಿರುವ ನಟಿ ನಾನು ಸುರಕ್ಷಿತವಾಗಿದ್ದೇನೆ ಎಂದಿದ್ದಾರೆ.
ಚಂಡೀಗಢ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆ ಕುರಿತು ವೀಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಕಂಗನಾ, ನನಗೆ ಮಾಧ್ಯಮಗಳು ಮತ್ತು ನನ್ನ ಹಿತೈಷಿಗಳಿಂದ ಸಾಕಷ್ಟು ಫೋನ್ ಕರೆಗಳು ಬರುತ್ತಿವೆ. ಮೊದಲನೆಯದಾಗಿ ನಾನು ಸುರಕ್ಷಿತವಾಗಿದ್ದು, ಸಂಪೂರ್ಣವಾಗಿ ಚೆನ್ನಾಗಿದ್ದೇನೆ ಎಂದಿದ್ದಾರೆ.
ಇಂದು ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಚೆಕ್ ಮುಗಿಸಿ ಹೊರ ಬಂದ ತಕ್ಷಣ ಎರಡನೇ ಕ್ಯಾಬಿನ್ನಲ್ಲಿದ್ದ ಸಿಐಎಸ್ಎಫ್ನ ಸೆಕ್ಯುರಿಟಿ ಸಿಬ್ಬಂದಿ ನನ್ನ ಕೆನ್ನೆಗೆ ಹೊಡೆದರು. ಈ ವೇಳೆ ಯಾಕೆ ಹೀಗೆ ಮಾಡಿದೆ ಎಂದು ಆಕೆಯನ್ನು ಪ್ರಶ್ನಿಸಿದಾಗ, ರೈತರ ಪ್ರತಿಭಟನೆಗೆ ನನ್ನ ಬೆಂಬಲವಿದೆ ಎಂದಳು. ಸದ್ಯ ನಾನು ಸುರಕ್ಷಿತವಾಗಿದ್ದೇನೆ ಆದರೆ ಪಂಜಾಬ್ನಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ ಮತ್ತು ಉಗ್ರವಾದದ ಬಗ್ಗೆ ನನಗೆ ಕಾಳಜಿ ಇದೆ ಎಂದು ಕಂಗನಾ ಹೇಳಿದ್ದಾರೆ.
ಘಟನೆ ಹಿನ್ನೆಲೆ: ಕಂಗನಾ ಚಂಡೀಗಢದಿಂದ ದೆಹಲಿಗೆ ಹೋಗಬೇಕಿದ್ದರಿಂದ ಮಧ್ಯಾಹ್ನ 3.30ರ ಸುಮಾರಿಗೆ ಚಂಡೀಗಢ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಭದ್ರತಾ ತಪಾಸಣೆ ವೇಳೆ ಸಿಐಎಸ್ಎಫ್ ಮಹಿಳಾ ಸಿಬ್ಬಂದಿ ಕುಲ್ವಿಂದರ್ ಕೌರ್ ಕಂಗನಾ ಕೆನ್ನೆಗೆ ಬಾರಿಸಿದ್ದರು. ಈ ವೇಳೆ ಕಂಗನಾ ಜೊತೆಗಿದ್ದ ಮಯಾಂಕ್ ಮಧುರ್ ಅವರು ಕುಲ್ವಿಂದರ್ ಕೌರ್ ಗೆ ಕಪಾಳಮೋಕ್ಷ ಮಾಡಲು ಯತ್ನಿಸಿದರು. ಇದಾದ ಬಳಿಕ ಕಂಗನಾ ಪೊಲೀಸರಿಗೆ ದೂರು ನೀಡಿ ಬಳಿಕ ವಿಮಾನದ ಮೂಲಕ ದೆಹಲಿಗೆ ಪ್ರಯಾಣ ಬೆಳೆಸಿದರು.