ವಿವಿಧ ಮುಸ್ಲಿಂ ಸಂಘಟನೆಗಳ ಮನವಿ ಮೇರೆಗೆ ಸರ್ಕಾರವು ರಾಜ್ಯದಲ್ಲಿ ಇಂದು ಬಿಡುಗಡೆ ಆಗಬೇಕಿದ್ದ ʻಹಮಾರೆ ಬಾರಾಹ್ʼ ಚಲನಚಿತ್ರ ಬಿಡುಗಡೆ ಮತ್ತು ಪ್ರಸಾರವನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ʻಹಮಾರೆ ಬಾರಹ್ʼ ಚಿತ್ರವನ್ನು ಈಗಾಗಲೇ ದೇಶಾದ್ಯಂತ ವಿವಿಧೆಡೆ ನಿಷೇಧಿಸಲಾಗಿದೆ.
ಕಮಲ್ ಚಂದ್ರಾ ನಿರ್ದೇಶನದ ಅನ್ನು ಕಪೂರ್ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಹಮಾರೆ ಬಾರಾ’ ಮುಸ್ಲಿಂ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯದ ಕತೆಯನ್ನು ಒಳಗೊಂಡಿದೆ. ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು, ಗಮನ ಸೆಳೆದಿದೆ. ಮೌಲಾ ಒಬ್ಬ, ಮಹಿಳೆಯರು ಕೇವಲ ಪುರುಷರ ಭೋಗ ವಸ್ತುಗಳು, ಅವರಿಗೆ ಸ್ವಾತಂತ್ರ್ಯ ನೀಡುವಂತಿಲ್ಲ ಎಂಬಿತ್ಯಾದಿ ಭಾಷಣ ಮಾಡುತ್ತಿರುವ ದೃಶ್ಯದಿಂದ ಪ್ರಾರಂಭವಾಗುವ ಟೀಸರ್, ಮುಸ್ಲಿಂ ಮಹಿಳೆಯರ ಮೇಲೆ ಅವರ ಪತಿ ನಡೆಸುತ್ತಿರುವ ದೌರ್ಜನ್ಯದ ದೃಶ್ಯಗಳನ್ನು ತೋರಿಸಲಾಗಿದೆ.
ಅಜರ್ ತಂಬೋಲ್ ಎಂಬುವರು, ಸಿನಿಮಾದ ಟೀಸರ್ ಅನ್ನು ಆಧರಿಸಿ ಸಿನಿಮಾದ ವಿರುದ್ಧ ಬಾಂಬೆ ಹೈಕೋರ್ಟ್ನಲ್ಲಿ ಮೊಕದ್ದಮೆ ಹೂಡಿದ್ದರು. ಅರ್ಜಿ ವಿಚಾರಣೆ ಮಾಡಿದ ಬಾಂಬೆ ಹೈಕೋರ್ಟ್, ಜೂನ್ 14 ರವರೆಗೆ ಸಿನಿಮಾದ ಬಿಡುಗಡೆಗೆ ತಡೆ ನೀಡಿದ್ದು, ಅಂದು ಮರು ವಿಚಾರಣೆ ನಡೆಯಲಿದೆ. ಸಿನಿಮಾದ ಬಗ್ಗೆ ಸಿಬಿಎಫ್ಸಿ ಬಾಂಬೆ ಹೈಕೋರ್ಟ್ಗೆ ಮಾಹಿತಿ ನೀಡಿದ್ದು, ಸಿನಿಮಾದ ಸರ್ಟಿಫಿಕೇಟ್ ನೀಡುವ ಹಕ್ಕಿದ್ದು, ಅದನ್ನು ತಾವು ನಿಭಾಯಿಸಿದ್ದು, ಟ್ರೈಲರ್ ಬಗ್ಗೆ ತಾವೇನೂ ಮಾಡಲಾಗುವುದಿಲ್ಲ ಎಂದಿದೆ.
ಸಿನಿಮಾ ತಂಡದ ಪರ ವಕೀಲ ಅದ್ವೈತ ಸೆತ್ನಾ ಮಾತನಾಡಿ, ಸಿನಿಮಾವು ಎಂಟು ಸದಸ್ಯರ ಸಮಿತಿಯಿಂದ ನೋಡಿ, ಅವರು ಸೂಚಿಸಿದ ಕೆಲವು ಬದಲಾವಣೆಗಳನ್ನು ಮಾಡಿದ ಬಳಿಕ ಸಿನಿಮಾಕ್ಕೆ ‘ಯು/ಎ’ ಸರ್ಟಿಫಿಕೇಟ್ ನೀಡಲಾಗಿದೆ. ಚಿತ್ರತಂಡವು ಕೆಲವು ಸಂಭಾಷಣೆಗಳನ್ನು ತೆಗೆದುಹಾಕಿದೆ. ವಿಚಾರಣೆ ನಡೆಸುತ್ತಿರುವ ಬಾಂಬೆ ಹೈಕೋರ್ಟ್ ಮುಂದಿನ ವಿಚಾರಣೆಯನ್ನು ಜೂನ್ 10ಕ್ಕೆ ನಿಗದಿಪಡಿಸಿದೆ.
ಈ ನಡುವೆ ಚಿತ್ರತಂಡವು ಮುಂಬೈನ ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ. ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸಿರುವ ಅನು ಕಪೂರ್, ತಮಗೆ ಕೊಲೆ ಬೆದರಿಕೆಗಳು ಬರುತ್ತಿವೆ ಎಂದಿದ್ದು, ಪೊಲೀಸ್ ರಕ್ಷಣೆ ಕೋರಿದ್ದಾರೆ. ಅಲ್ಲದೆ, ಸಿನಿಮಾ ನೋಡಿ ಬಳಿಕ ಅಭಿಪ್ರಾಯವನ್ನು ವ್ಯಕ್ತಪಡಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಸಹ ಮಾಡಿದ್ದಾರೆ.
ʻಹಮಾರೆ ಬಾರಾಹ್ʼ ಚಲನಚಿತ್ರ ಬಿಡುಗಡೆಗೆ ಅನುಮತಿ ಕೊಟ್ಟಲ್ಲಿ ರಾಜ್ಯದ ಶಾಂತಿಗೆ ಭಂಗವುಂಟಾಗುತ್ತದೆ. ಜೊತೆಗೆ ಸೌಹಾರ್ದತೆ ಹದಗೆಡುವ ಸಾಧ್ಯತೆಯಿದ್ದು, ಮಹಿಳೆಯರ ಭಾವನೆಗಳಿಗೂ ಧಕ್ಕೆಯುಂಟಾಗುತ್ತದೆ ಎಂಬ ಸನ್ನಿವೇಶಗಳು ಕಂಡುಬಂದಿವೆ. ಚಲನಚಿತ್ರ ಬಿಡುಗಡೆಗೂ ಮುನ್ನ ಸಿನಿಮಾ (ರೆಗ್ಯೂಲೇಶನ್) ಆಕ್ಟ್ -1964ರ ಸೆಕ್ಷನ್ -15(2)ರಡಿ ಸಂಬಂಧಪಟ್ಟವರಿಗೆ ನೋಟೀಸನ್ನು ಜಾರಿ ಮಾಡಿ ವಿವರಣೆ ಪಡೆಯಬೇಕಾಗಿತ್ತು. ಆದರೆ ಸದರಿ ಚಲನಚಿತ್ರದ ನಿರ್ದೇಶಕ ಕಮಲ್ ಚಂದ್ರ ಮತ್ತು ನಿರ್ಮಾಪಕರಾದ ಬೀರೇಂದ್ರ ಭಗತ್, ರವಿ ಎಸ್.ಗುಪ್ತ, ಶಿಯೋ ಬಲಕ್ ಸಿಂಗ್, ಸಂಜಯ್ ನಾಗಪಾಲ್ ಹಾಗೂ ಮತ್ತಿತರರು ನೆರೆ ರಾಜ್ಯದಲ್ಲಿದ್ದು, ಸದರಿಯವರಿಗೆ ಕರ್ನಾಟಕ ಸಿನಿಮಾ (ರೆಗ್ಯೂಲೇಶನ್) ಆಕ್ಟ್ -1964ರ ಸೆಕ್ಷನ್ -15(2) ಅಡಿ ನೋಟೀಸು ಜಾರಿ ಮಾಡಿ, ಅವರುಗಳಿಂದ ವಿವರಣೆ ಪಡೆದು ಪರಿಶೀಲಿಸಲು ಸಾಕಷ್ಟು ಕಾಲಾವಕಾಶ ಇಲ್ಲದಿರುವುದರಿಂದ ಸಿನಿಮಾ ನಿಷೇಧಕ್ಕೆ ಆದೇಶಿಸಿದೆ. ಎರಡು ವಾರಗಳ ಅವಧಿಗೆ ಅಥವಾ ಮುಂದಿನ ಆದೇಶದ ವರೆಗೆ ರಾಜ್ಯದ ಯಾವುದೇ ಎಲೆಕ್ಟ್ರಾನಿಕ್ ಮಾಧ್ಯಮ, ಸಾಮಾಜಿಕ ಜಾಲತಾಣ, ಸಿನಿಮಾ ಮಂದಿರಗಳು, ಖಾಸಗಿ ಟಿವಿ ಚಾಲನ್ಗಳು, ಇತರೆ ಮಾಧ್ಯಮಗಳ ಮೂಲಕ ಪ್ರಸಾರ ಮಾಡುವುದನ್ನು ರಾಜ್ಯದಲ್ಲಿ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.