ಡಾ.ವಿಷ್ಣುವರ್ಧನ್ ಸ್ಮಾರಕ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ 10 ಗುಂಟೆ ಜಾಗವನ್ನು ನೀಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಡಾ. ವಿಷ್ಣುವರ್ಧನ್ ಪುಣ್ಯಭೂಮಿ ಟ್ರಸ್ಟ್ ವತಿಯಿಂದ ಡಾ. ವಿಷ್ಣುವರ್ಧನ್ ಸ್ಮಾರಕ ಭವನ ನಿರ್ಮಾಣ ಮಾಡುವುದಕ್ಕೆ ಜಾಗವಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ 10 ಗುಂಟೆ ಜಮೀನನ್ನು ಟ್ರಸ್ಟ್ಗೆ ನೀಡಿ ಸ್ಮಾರಕ ನಿರ್ಮಾಣಕ್ಕೆ ಅನುಕೂಲ ಮಾಡಿಕೊಡುವುದಕ್ಕೆ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿಗಳಾದ ಎನ್. ವಿ. ಅಂಜಾರಿಯಾ ಹಾಗೂ ಕೆ.ವಿ ಅರವಿಂದ್ ಅವರ ವಿಭಾಗೀಯ ಪೀಠವು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿದೆ.
ಹೈಕೋರ್ಟ್ನಲ್ಲಿ ವಿಚಾರಣೆ ವೇಳೆ ವಾದ ಮಂಡಿಸಿದ ಅರ್ಜಿದಾರರದ ಪರ ವಕೀಲರು, ಡಾ.ವಿಷ್ಣುವರ್ಧನ್ ಮೇರು ನಟ ಆಗಿದ್ದು, ಅಪಾರ ಅಭಿಮಾನಿಗಳು ಅವರನ್ನು ಅರಾಧಿಸುತ್ತಾರೆ. ವಿಷ್ಣುವರ್ಧನ್ ಅವರ ಹುಟ್ಟಿದ ದಿನ ಹಾಗೂ ದೈವಾಧೀನರಾದ ದಿನದಂದು ಅವರಿಗೆ ಪೂಜೆ ಮಾಡುವ ಮೂಲಕ ಗೌರವ ಸಲ್ಲಿಸುವುದು ಅಭಿಮಾನಿಗಳ ಅಭಿಲಾಷೆಯಾಗಿದೆ. ಇದನ್ನು ಪರಿಗಣಿಸಿ ಮೈಲಸಂದ್ರ ಗ್ರಾಮದಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕವನ್ನು ನಿರ್ಮಾಣ ಮಾಡಲು 10 ಗುಂಟೆ ಜಾಗ ಬೇಕಿದೆ. ಈ ಜಾಗ ಮಂಜೂರು ಮಾಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು.
ಆದರೆ, ವಾದ ಆಲಿಸಿದ ಹೈಕೋರ್ಟ್ ನ್ಯಾಯಪೀಠದಿಂದ ಸಿನಿಮಾ ತಾರೆಯರ ಸ್ಮಾರಕ ನಿರ್ಮಿಸುವಂತೆ ಕೋರಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುವುದು ಸೂಕ್ತವಲ್ಲ. ಈ ಅರ್ಜಿಯಲ್ಲಿ ಯಾವುದೇ ರೀತಿಯಲ್ಲಿಯೂ ಸಾರ್ವಜನಿಕ ಹಿತಾಸಕ್ತಿ ಅಡಗಿಲ್ಲ. ನೀವು ಬೇಕಿದ್ದಲ್ಲಿ ಸರ್ಕಾರ ಅಥವಾ ಸಂಬಂಧಪಟ್ಟ ಪ್ರಾಧಿಕಾರದ ಮೂಲಕ ಸಮಸ್ಯೆ ಇತ್ಯರ್ಥ ಮಾಡಿಕೊಳ್ಳಿ ಎಂದು ಹೇಳಿ ಪಿಐಎಲ್ ಅರ್ಜಿಯನ್ನು ವಜಾಗೊಳಿಸಲಾಗುತ್ತಿದೆ. ಜೊತೆಗೆ, ಅರ್ಜಿಯಲ್ಲಿ ಯಾವುದೇ ತೆರನಾದ ಸಾರ್ವಜನಿಕ ಹಿತಾಸಕ್ತಿ ಕಾಣಿಸುತ್ತಿಲ್ಲ. ಈ ಸಂಬಂಧಪಟ್ಟಂತಹ ಅರ್ಜಿಗಳ ಬಗ್ಗೆ ಹೈಕೋರ್ಟ್ ವ್ಯವಹರಿಸಲಾಗುವುದಿಲ್ಲ. ನೀವು ಸುಖಾಸುಮ್ಮನೇ ಪಿಐಎಲ್ ಅರ್ಜಿ ಹಾಕಿಕೊಂಡು ಬಂದು ನ್ಯಾಯಾಲಯದ ಸಮಯ ವ್ಯರ್ಥ ಮಾಡಿದ್ದಕೆ ಅಧಿಕ ದಂಡ ವಿಧಿಸಬಹುದು. ಆದರೆ, ತಾಳ್ಮೆಯಿಂದಲೇ ಅರ್ಜಿಯನ್ನು ವಜಾಗೊಳಿಲಾಗುತ್ತಿದೆ ಎಂದು ಎಚ್ಚರಿಕೆ ನೀಡಲಾಯಿತು.