ಬೆಂಗಳೂರಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಭಾಗಿಯಾಗಿ ಸದ್ಯ ಬೆಂಗಳೂರು ಪೊಲೀಸರ ವಶದಲ್ಲಿರುವ ನಟಿ ಹೇಮಾ ಅವರಿಗೆ ಮತ್ತೊಂದು ಶಾಕ್ ಎದುರಾಗಿದೆ.
ಮೂವಿ ಆರ್ಟಿಸ್ಟ್ ಅಸೋಸಿಯೇಷನ್ (ಮಾ) ನ ಪದಾಧಿಕಾರಿಯೂ ಆಗಿರುವ ಹೇಮಾ ಕೊಲ್ಲ ಅವರನ್ನು ಮಾ ಸಂಘದಿಂದ ಉಚ್ಛಾಟನೆ ಮಾಡಿ ಆದೇಶವನ್ನು ‘ಮಾ’ನ ಹಾಲಿ ಅಧ್ಯಕ್ಷ ಮಂಚು ವಿಷ್ಣು ಹೊರಡಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಈ ಬಗ್ಗೆ ಟ್ವೀಟ್ ಮಾಡಿದ್ದ ಮಂಚು ವಿಷ್ಣು, ಹೇಮಾ ಕೊಲ್ಲ ಪರವಾದ ನಿಲವು ತಳೆದಿದ್ದರು. ಹೇಮಾ ವಿರುದ್ಧ ಕೆಲವು ಷಡ್ಯಂತ್ರಗಳು ನಡೆಯುತ್ತಿವೆ. ಆಕೆ ಅಪರಾಧಿ ಎಂದು ನಿರ್ಧಾರವಾಗುವವರೆಗೆ ಹೇಮಾ ವಿರುದ್ಧ ನಿರ್ಣಯಕ್ಕೆ ಬರಬೇಡಿ, ಸಾಮಾಜಿಕ ಜಾಲತಾಣದಲ್ಲಿ ಏನೂ ನಿಂದನಾತ್ಮಕ ಪೋಸ್ಟ್ಗಳನ್ನು ಹಂಚಿಕೊಳ್ಳಬೇಡಿ ಎಂದಿದ್ದರು. ಆದರೆ ಈಗ ಮಂಚು ವಿಷ್ಣು ಅವರೇ ಹೇಮಾ ಅವರನ್ನು ಕಲಾವಿದರ ಸಂಘದಿಂದ ಹೊರಹಾಕಿದ್ದಾರೆ.
ಡ್ರಗ್ಸ್ ಪ್ರಕರಣದಲ್ಲಿ ಹೆಸರು ಕೇಳಿ ಬಂದಿರುವ ನಟಿ ಹೇಮಾರ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕು ಎಂದು ಪದಾಧಿಕಾರಿಗಳ ಸಲಹೆ ಪಡೆದು ಅಂತಿಮವಾಗಿ ಹೇಮಾರನ್ನು ಕಲಾವಿದರ ಸಂಘದಿಂದ ವಜಾ ಮಾಡಲಾಗಿದೆ ಎಂದು ಮಂಚು ವಿಷ್ಣು ಹೇಳಿದ್ದಾರೆ. ವಜಾ ಮಾಡುವ ಮುನ್ನ, ಹೇಮಾಗೆ ಸಂಘದಿಂದ ನೊಟೀಸ್ ನೀಡಲಾಗಿತ್ತಂತೆ. ಡ್ರಗ್ಸ್ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿತ್ತಂತೆ. ಆದರೆ ಹೇಮಾ ಆ ನೊಟೀಸ್ಗೂ ಯಾವುದೇ ಉತ್ತರ ನೀಡದೇ ಇರುವ ಕಾರಣ ಈಗ ಮಂಚು ವಿಷ್ಣು ಇತರೆ ಪದಾಧಿಕಾರಿಗಳ ನಿರ್ಣಯವನ್ನು ತೆಗೆದುಕೊಂಡು ಹೇಮಾರನ್ನು ಸ್ಥಾನದಿಂದ ತೆಗೆದು ಹಾಕಿರುವುದು ಮಾತ್ರವೇ ಅಲ್ಲದೆ ಕಲಾವಿದರ ಸಂಘದಿಂದಲೂ ಹೊರ ಹಾಕಿದ್ದಾರೆ.
ಡ್ರಗ್ಸ್ ಪ್ರಕರಣದಲ್ಲಿ ನಟಿ ಹೇಮಾ ಹೆಸರು ಕೇಳು ಬಂದ ಬಳಿಕ, ಹೇಮಾರನ್ನು ತೆಲುಗು ಚಿತ್ರರಂಗದಿಂದಲೇ ನಿಷೇಧಿಸಬೇಕು ಎಂಬ ಒತ್ತಾಯ ಕೆಲವು ಹಿರಿಯ ನಟ-ನಟಿಯರಿಂದ ಪದೇ ಪದೇ ಕೇಳಿ ಬರುತ್ತಲೇ ಇತ್ತು. ಆದರೆ ತೆಲುಗು ಚಿತ್ರರಂಗದಿಂದ ನಿಷೇಧ ಎಂಬುದು ಕಲಾವಿದರ ಸಂಘದ ಕೈಯಲ್ಲಿಲ್ಲವಾದ್ದರಿಂದ ಕಲಾವಿದರ ಸಂಘದ ಅಧ್ಯಕ್ಷ ಮಂಚು ವಿಷ್ಣು ಪ್ರಸ್ತುತ ಕಲಾವಿದರ ಸಂಘದಿಂದಷ್ಟೆ ಹೊರಗಿಟ್ಟಿದ್ದಾರೆ. ಇನ್ನು ಮುಂದೆ ಹೇಮಾಗೆ ಸಿನಿಮಾ ಅವಕಾಶಗಳು ಸಿಗುವುದು ಸಹ ಕಡಿಮೆ ಆಗಲಿದೆ.