ಇಂಫಾಲ್: ಮಣಿಪುರದ ಹಿಂಸಾಚಾರ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡು ಭಯೋತ್ಪಾದನೆಯನ್ನು ಹರಡಲು ಯತ್ನಿಸಿದ ಆರೋಪದ ಮೇಲೆ ಎನ್ಐಎ ಪ್ರಮುಖ ಆರೋಪಿಯನ್ನು ಇಂಫಾಲ್ ವಿಮಾನ ನಿಲ್ದಾಣದಲ್ಲಿ ಬಂಧಿಸಿದೆ. ಬಂಧಿತ ಆರೋಪಿಯನ್ನು ಕುಕಿ ನ್ಯಾಷನಲ್ ಫ್ರಂಟ್-ಮಿಲಿಟರಿ ಕೌನ್ಸಿಲ್ (ಕೆಎನ್ಎಫ್-ಎಂಸಿ) ಸದಸ್ಯ ಥೋಂಗ್ಮಿಂಥಾಂಗ್ ಹಾಕಿಪ್ ಅಲಿಯಾಸ್ ರೋಜರ್ ಎಂದು ಗುರುತಿಸಲಾಗಿದೆ.
ಆರೋಪಿ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿದೆ. ಅಲ್ಲದೇ ಆತನ ವಿರುದ್ಧ ಕಳೆದ ವರ್ಷ ಜುಲೈ 19 ರಂದು ಎನ್ಐಎ ಸುಮೋಟೋ ಪ್ರಕರಣ ದಾಖಲಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮ್ಯಾನ್ಮಾರ್ ಮೂಲದ ಭಯೋತ್ಪಾದಕ ಸಂಘಟನೆಗಳ ಬೆಂಬಲದೊಂದಿಗೆ ಕುಕಿ ಮತ್ತು ಝೋಮಿ ದಂಗೆಕೋರರನ್ನು ಸರ್ಕಾರದ ವಿರುದ್ಧ ತಿರುಗಿ ಬೀಳುವಂತೆ ಮಾಡುವ ಸಂಚು ರೂಪಿಸಿದ್ದರು. ಈ ಪ್ರದೇಶದಲ್ಲಿನ ಪ್ರಸ್ತುತ ಜನಾಂಗೀಯ ಅಶಾಂತಿಯನ್ನು ಬಳಸಿಕೊಂಡು ಈ ಕೃತ್ಯ ಎಸಗಲು ಮುಂದಾಗಿದ್ದರು. ಅಲ್ಲದೇ ಬಂಧಿತ ಆರೋಪಿ ಹಿಂಸಾಚಾರದ ಸಮಯದಲ್ಲಿ ವಿವಿಧ ಸ್ಥಳಗಳಲ್ಲಿ ಭದ್ರತಾ ಪಡೆಗಳ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಣಿಪುರ ರಾಜ್ಯದಲ್ಲಿನ ಅಸ್ಥಿರ ಪರಿಸ್ಥಿತಿಯನ್ನು ಉಲ್ಬಣಗೊಳಿಸಲು ಮತ್ತು ಜನರ ಮನಸ್ಸಿನಲ್ಲಿ ಭಯವನ್ನು ಹುಟ್ಟು ಹಾಕಲು ಆರೋಪಿ ಮ್ಯಾನ್ಮಾರ್ನ ಕುಕಿ ನ್ಯಾಷನಲ್ ಫ್ರಂಟ್-ಬರ್ಮಾ (ಕೆಎನ್ಎಫ್-ಬಿ) ದಂಗೆಕೋರ ಗುಂಪಿನೊಂದಿಗೆ ಸಂಪರ್ಕದಲ್ಲಿದ್ದ. ಹಿಂಸಾಚಾರದಲ್ಲಿ ಬಳಸಲು ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕ ಗಳನ್ನು ಪೂರೈಸಲು ಆರೋಪಿಗಳು ಕೆಎನ್ಎಫ್-ಬಿ ನಾಯಕರನ್ನು ಭೇಟಿಯಾಗಿದ್ದ ಎಂದು ಎನ್ಐಎ ತನಿಖೆ ವೇಳೆ ತಿಳಿದು ಬಂದಿದೆ.