ಕನ್ನಡ ಬಿಗ್ ಬಾಸ್ನ ಮಾಜಿ ಸ್ಪರ್ಧಿಗಳಾದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ದಾಂಪತ್ಯ ಜೀವನ ಅಂತ್ಯವಾಗಿದೆ. ಚಂದನ್ ಹಾಗೂ ನಿವೇದಿತಾಗೆ 2ನೇ ಹೆಚ್ಚುವರಿ ನ್ಯಾಯಾಲಯವು ವಿಚ್ಛೇದನ ಮಂಜೂರು ಮಾಡಿದೆ. ಈ ಮೂಲಕ ಚಂದನ್ ಶೆಟ್ಟಿ ಮತ್ತು ನಿವೇದಿತಾರ 4 ವರ್ಷಗಳ ದಾಂಪತ್ಯ ಜೀವನ ಕೊನೆಯಾಗಿದೆ.ಈ ಬಗ್ಗೆ ಸ್ವತಃ ಚಂದನ್ ಶೆಟ್ಟಿ ಮತ್ತು ನಿವೇದಿತಾ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ.
ಒಂದೇ ದಿನದಲ್ಲಿ ವಿಚ್ಛೇದನ ಹೇಗೆ ಸಾಧ್ಯ ಎನ್ನುವ ಪ್ರಶ್ನೆಗಳ ನಡುವೆ ಮಾಜಿ ದಂಪತಿಗಳು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಇದನ್ನು ಖಚಿತಪಡಿಸಿದ್ದಾರೆ. ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಇಬ್ಬರೂ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ತಮ್ಮ ನಾಲ್ಕು ವರ್ಷದ ದಾಂಪತ್ಯ ಪರಸ್ಪರ ಒಪ್ಪಿಗೆಯ ಮೇರೆಗೆ ಅಂತ್ಯವಾಗಿದೆ ಎಂದು ತಿಳಿಸಿದ್ದಾರೆ.
‘ಈ ದಿನ, ಚಂದನ್ ಶೆಟ್ಟಿ ಮತ್ತು ನಾನು, ನಮ್ಮ ದಾಂಪತ್ಯ ಜೀವನವನ್ನು ಕಾನೂನುಬದ್ಧವಾಗಿ ಪರಸ್ಪರ ಒಪ್ಪಿಗೆಯಿಂದ ಕೊನೆಗೊಳಿಸಿದ್ದೇವೆ. ನಮ್ಮ ನಿರ್ಧಾರವನ್ನು ಮತ್ತು ನಮ್ಮ ಜೀವನದ ಖಾಸಗಿತನವನ್ನ ಗೌರವಿಸಲು ಕೋರುತ್ತೇವೆ. ಪ್ರತಿ ಸಂದರ್ಭದಲ್ಲೂ ನಮ್ಮೊಂದಿಗೆ ನಿಂತ ಮಾಧ್ಯಮ ಮಿತ್ರರು, ನಮ್ಮ ಸ್ನೇಹಿತರು ಮತ್ತು ಅಭಿಮಾನಿಗಳಿಂದ ನಾವು ಎಂದಿನಂತೆ ಬೆಂಬಲವನ್ನು ಕೋರುತ್ತೇವೆ. ನಾವು ನಮ್ಮ ಪ್ರತ್ಯೇಕ ಮಾರ್ಗ ಅನುಸರಿಸಿದರೂ,ಪರಸ್ಪರ ಒಬ್ಬರನೊಬ್ಬರು ಗೌರವಿಸುತ್ತೆವೆ. ಸೂಕ್ಷ್ಮ ಪರಿಗಣನೆಗಾಗಿ ಎಲ್ಲರಿಗೂ ಧನ್ಯವಾದಗಳು’ ಎಂದು ನಿವೇದಿತಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಇನ್ನು ನಿವೇದಿತಾ ಗೌಡ ಅವರು ಪೋಸ್ಟ್ ಮಾಡಿದ ರೀತಿಯಲ್ಲೇ ಚಂದನ್ ಶೆಟ್ಟಿ ಸಹ ಪೋಸ್ಟ್ ಮಾಡಿದ್ದಾರೆ. ಆ ಮೂಲಕ ತಮ್ಮ ವಿಚ್ಛೇದನದ ಬಗ್ಗೆ ಅಧಿಕೃತವಾಗಿ ಇಬ್ಬರೂ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ತಮ್ಮ ದಾಂಪತ್ಯ ಜೀವನವನ್ನು ಕಾನೂನು ಬದ್ಧವಾಗಿ ಒಪ್ಪಿ ಕೊನೆಗೊಳಿಸಿಕೊಂಡಿರುವುದಾಗಿ ಅವರು ಪೋಸ್ಟ್ ಹಾಕಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಅಧಿಕೃತ ಖಾತೆಗಳಲ್ಲಿ ನಿವೇದಿತಾ ಗೌಡ ಹಾಗೂ ಚಂದನ್ ಈ ಪೋಸ್ಟ್ ಮಾಡಿದ್ದಾರೆ. ವಿಚ್ಛೇದನ ಪಡೆದಿದ್ದರು ನಾವು ಒಬ್ಬರನೊಬ್ಬರು ಗೌರವಿಸೋದಾಗಿ ಹೇಳಿದ್ದಾರೆ.