ಬೆಂಡೆಕಾಯಿ ಎಂಬ ತರಕಾರಿಯನ್ನು ಹಲವು ರೀತಿಯ ಜೀವಸತ್ವಗಳ ಆಗಾರ ಎನ್ನಬಹುದು. ಇದರಿಂದ ತಯಾರಿಸುವ ಅಡುಗೆ ಸಹ ಬಹಳ ರುಚಿಯಾಗಿರುತ್ತದೆ. ಇನ್ನು ಕೆಲವರಿಗೆ ಬೆಂಡೆ ಎಂದರೇನೇ ಅಷ್ಟಕಷ್ಟೆ. ಆದರೆ ಈ ತರಕಾರಿಯಿಂದ ಸಿಗುವ ಪ್ರಯೋಜನಗಳು ಮಾತ್ರ ಅಷ್ಟಿಷ್ಟಲ್ಲ. ಇದರಲ್ಲಿ ಅಡಗಿರುವ ಪೋಷಕಾಂಶಗಳು ಹಲವು ರೋಗಗಳಿಗೆ ಮನೆಮದ್ದು.
ಕಡಿಮೆ ಕ್ಯಾಲೊರಿಗಳನ್ನು ಒಳಗೊಂಡಿರುವ ಬೆಂಡೆಕಾಯಿಯಲ್ಲಿ ವಿಟಮಿನ್, ಮಿನರಲ್ ಸೇರಿದಂತೆ ಅನೇಕ ಪೋಷಕಾಂಶಗಳಿವೆ. ಅದರಲ್ಲೂ ಮುಖ್ಯವಾಗಿ ಈ ತರಕಾರಿಯಲ್ಲಿ ಫೈಬರ್ ಅಂಶ ಹೇರಳವಾಗಿರುತ್ತದೆ ಎಂಬುದು ನೆನಪಿರಲಿ. ದಿನನಿತ್ಯದ ಆಹಾರ ಕ್ರಮಗಳಲ್ಲಿ ಬೆಂಡೆ ಕಾಯಿಯನ್ನು ಬಳಸುವುದರಿಂದ ಸಿಗುವ ಅನುಕೂಲಗಳೇನು ಎಂಬುದನ್ನು ಈ ಕೆಳಗೆ ತಿಳಿಸಲಾಗಿದೆ
-ದೇಹದ ಬೊಜ್ಜು ಕಡಿಮೆ ಮಾಡಲು ಬೆಂಡೆ ಕಾಯಿ ತಿನ್ನುವುದು ಉತ್ತಮ. ಏಕೆಂದರೆ ಇದು ದೇಹ ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರಿ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ. ಇದರಿಂದ ದೇಹ ತೂಕವು ನಿಯಂತ್ರಣಕ್ಕೆ ಬರಲಿದೆ. ಹಾಗೆಯೇ ರಾತ್ರಿಯಲ್ಲಿ ಬೆಂಡೆ ಕಾಯಿ ತುಂಡುಗಳನ್ನು ನೀರಿನಲ್ಲಿರಿಸಿ ಬೆಳಿಗ್ಗೆ ಆ ನೀರನ್ನು ಕುಡಿಯುವುದರಿಂದ ಸಹ ಬೊಜ್ಜನ್ನು ಕರಗಿಸಿಕೊಳ್ಳಬಹುದು.
-ಬೆಂಡೆಯಲ್ಲಿ ನಾರಿನಾಂಶದ ಪ್ರಮಾಣವು ಅಧಿಕದಲ್ಲಿರುತ್ತದೆ. ಇದನ್ನು ನಿಮ್ಮ ಆಹಾರದಲ್ಲಿ ಬಳಸುವುದರಿಂದ ಹೊಟ್ಟೆ ನೋವು, ಗ್ಯಾಸ್ ಸಮಸ್ಯೆ, ಅತಿಸಾರ, ಮಲಬದ್ದತೆ ಮತ್ತು ಆ್ಯಸಿಡಿಟಿಯಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಈ ತರಕಾರಿಯಲ್ಲಿ ಗ್ಲೈಸೆಮಿಕ್ ಇನ್ಡೆಕ್ಸ್ ಕಡಿಮೆ ಮಟ್ಟದಲ್ಲಿರುವುದರಿಂದ ದೇಹದ ಸಕ್ಕರೆ ಮಟ್ಟವನ್ನು ಸಹ ನಿಯಂತ್ರಿಸುತ್ತದೆ.
-ಈ ತರಕಾರಿಯಲ್ಲಿ ವಿಟಮಿನ್ ಎ ಹೇರಳವಾಗಿ ಕಂಡುಬರುತ್ತದೆ. ವಿಟಮಿನ್ ಎ ತರಕಾರಿ ಸೇವನೆಯಿಂದ ದೃಷ್ಟಿ ದೋಷದಂತಹ ಸಮಸ್ಯೆಗೆ ಪರಿಹಾರ ಕಾಣಬಹುದು. ಹಾಗೆಯೇ ಬೆಂಡೆಕಾಯಿಯಲ್ಲಿ ಲುಟೀನ್, ಬೀಟಾ-ಕ್ಯಾರೋಟಿನ್, ಅ್ಯಂಟಿ-ಆಕ್ಸಿಡೆಂಟ್ ಗಳನ್ನು ಹೊಂದಿರುವುದರಿಂದ ಚರ್ಮ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ, ಕಣ್ಣಿನ ಕಾಯಿಲೆಗಳನ್ನು ದೂರ ಮಾಡುತ್ತದೆ.