ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರಾಣ ಪ್ರತಿಷ್ಠೆಯ ನಂತರದ ಎಲ್ಲಾ ಪೂಜಾ ಕೈಂಕರ್ಯಗಳನ್ನು ನಡೆಸಿದ್ದ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು, ಬಿಜೆಪಿಗೆ ಅತ್ಯಂತ ಮಹತ್ವದ ಅಯೋಧ್ಯೆ ಲೋಕಸಭಾ ಕ್ಷೇತ್ರದಲ್ಲಿ (ಫೈಜಾಬಾದ್) ಯಾಕೆ ಸೋಲಾಯಿತು ಎನ್ನುವ ವಿಚಾರದಲ್ಲಿ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಪೇಜಾವರ ಶ್ರೀಗಳು,
ಅಭ್ಯರ್ಥಿ ಆಯ್ಕೆಯ ವಿಚಾರದಲ್ಲಿ ಬಿಜೆಪಿ ಎಡವಿರಬಹುದು ಎನ್ನುವ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಸಮಾಜವಾದಿ ಪಕ್ಷದ ಅವಧೇಶ್ ಪ್ರಸಾದ್ ಅವರು ಬಿಜೆಪಿಯ ಲಲ್ಲು ಸಿಂಗ್ ಅವರನ್ನು 54,567 ಮತಗಳ ಅಂತರದಿಂದ ಸೋಲಿಸಿದ್ದರು. ಅಯೋಧ್ಯೆಯಲ್ಲಿನ ಸೋಲು ಬಿಜೆಪಿಯ ಕಾರ್ಯಕರ್ತರು ಮತ್ತು ಮುಖಂಡರಿಗೆ ತೀವ್ರ ನಿರಾಶೆಯನ್ನುಂಟು ಮಾಡಿತ್ತು. ಶ್ರೀರಾಮಚಂದ್ರನನ್ನು ತಂದವರು ನಾವೇ ಎಂದು ಬಿಜೆಪಿ ನಾಯಕರು ಸುಳ್ಳು ಹೇಳಿಕೊಂಡು, ಶ್ರೀರಾಮನ ವಿಚಾರದಲ್ಲಿ ವ್ಯಾಪಾರ ಮಾಡೋಕೆ ಹೊರಟ್ಟಿದ್ದೇ ಸೋಲಿಗೆ ಕಾರಣ ಎಂದು ವಿಜೇತ ಅಭ್ಯರ್ಥಿ ಲೇವಡಿ ಮಾಡಿದ್ದರು. “ಎರಡು ಅವಧಿಯಲ್ಲಿ ನಮ್ಮ ಭಾರತ ದೇಶದ ಗೌರವವನ್ನು ಅತ್ಯುನ್ನತ ಸ್ಥಾನಕ್ಕೆ ಮೋದಿಯವರು ಏರಿಸಿದ್ದಾರೆ. ಪ್ರಜೆಗಳು ಸುಖವಾಗಿ ಬದುಕುವ ರೀತಿಯಲ್ಲಿ ರಾಮರಾಜ್ಯ ಸ್ಥಾಪನೆ ಆಗಬೇಕಾಗಿದೆ. ಎಲ್ಲರ ಹಿತವನ್ನು ಬಯಸುವ ಸರ್ಕಾರ ಬರಲಿ ಎನ್ನುವುದು ನಮ್ಮ ಆಶಯ ” ಎಂದು ಉಡುಪಿ ಪೇಜಾವರ ಶ್ರೀಗಳು ಅಭಿಪ್ರಾಯ ಪಟ್ಟಿದ್ದಾರೆ. ಎರಡು ಅವಧಿಯ ನರೇಂದ್ರ ಮೋದಿ ಸರ್ಕಾರದ ಸಾಧನೆ ತೃಪ್ತಿ ತಂದಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು,
ತೃಪ್ತಿ ಎನ್ನುವುದು ಯಾರಿಗೂ ಬರಲು ಸಾಧ್ಯವಿಲ್ಲ. ಯಾಕೆಂದರೆ ಆಶೋತ್ತರಗಳಿಗೆ ಕೊನೆಯೇ ಇಲ್ಲ, ಆದರೆ ಸಮಾಧಾನ ಎನ್ನುವುದು ಇದೆ ಎಂದು ಶ್ರೀಗಳು ಹೇಳಿದ್ದಾರೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟಿಯೂ ಆಗಿರುವ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಮುಂದುವರಿದು ಮಾತನಾಡುತ್ತಾ, ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಮೋದಿಯವರು ಹೇಳಿದ್ದಾರೆ. ಎಲ್ಲರ ಹಿತವನ್ನು ಬಯಸುವ ಸರ್ಕಾರ ಅವರಿಂದ ಬರಲಿ ಎಂದು ಶ್ರೀಗಳು ಹೇಳಿದ್ದಾರೆ.