ಮೈಸೂರು: ಮದುವೆಯಾಗುವುದಾಗಿ ನಂಬಿಸಿ ವಿಚ್ಛೇದಿತ ಮಹಿಳೆಯೊಂದಿಗೆ ಲವ್ವಿ ಡವ್ವಿ ನಡೆಸುತ್ತಿದ್ದ ಯುವಕ, ಆಕೆಯನ್ನ ಗರ್ಭಿಣಿ ಮಾಡಿ ನಂತರ ಪರಾರಿಯಾಗಿರುವ ಘಟನೆ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ. 34 ವರ್ಷದ ಸಂತ್ರಸ್ತೆ ಮೈಸೂರಿನ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದು, ಆರೋಪಿ ಯುವಕನನ್ನು ಹರೀಶ್ (25) ಎಂದು ಗುರುತಿಸಲಾಗಿದೆ.
ಪಿರಿಯಾಪಟ್ಟಣ ಮೂಲದ ಮಹಿಳೆ ಮೈಸೂರಿನ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾದ್ದಾರೆ. ಈಕೆ 2018ರಲ್ಲಿ ಗಂಡನಿಂದ ವಿಚ್ಛೇದನ ಪಡೆದು ಪ್ರತ್ಯೇಕವಾಗಿ ಬದುಕಿತ್ತಿದ್ದರು. ನಂತರ ಈಕೆಯ ಬಾಳಲ್ಲಿ ಎಂಟ್ರಿಯಾದ ಹರೀಶ್ ಮದುವೆಯಾಗುವುದಾಗಿ ನಂಬಿಸಿದ್ದಾನೆ. ಬಳಿಕ ಲೈಂಗಿಕವಾಗಿ ಬಳಸಿಕೊಂಡು ಗರ್ಭಿಣಿ ಮಾಡಿ ಇದೀಗ ಕೈಕೊಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿ ಹರೀಶ್ ಮದ್ಯ ಕುಡಿಸಿ ನನ್ನ ಮೇಲೆ ಬಲವಂತವಾಗಿ ಅತ್ಯಾಚಾರ ಮಾಡಿದ್ದಾನೆ ಎಂಬ ಆರೋಪದಡಿ ಮಹಿಳೆ ದೂರು ನೀಡಿದ್ದು, ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹರೀಶ್ ನನ್ನ ಮೇಲೆ ಅತ್ಯಾಚಾರ ಮಾಡಿ 2 ತಿಂಗಳಿನಿಂದ ಕಾಣೆಯಾಗಿದ್ದಾನೆ. ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ, ಪೊಲೀಸರಿಂದ ನನಗೆ ನ್ಯಾಯ ಸಿಗುವ ಭರವಸೆಯಿದೆ. ಆತ ನನ್ನನ್ನ ಮದುವೆಯಾದ್ರೆ ಕೇಸ್ ವಾಪಸ್ ಪಡೆಯುತ್ತೇನೆ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ.