ಅಹಮದಾಬಾದ್: ಟೀಂ ಇಂಡಿಯಾ (Team India) ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಶತಕದ ಬ್ಯಾಟಿಂಗ್ ನೆರವಿನಿಂದ ಮೊದಲ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ (Australia) ವಿರುದ್ಧ ಭಾರತ 88 ರನ್ಗಳ ಮುನ್ನಡೆ ಸಾಧಿಸಿದೆ.
ಬಾರ್ಡರ್ ಗಾವಾಸ್ಕರ್ ಟ್ರೋಫಿ (Border Gavaskar Trophy) ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ 4ನೇ ದಿನದಾಟದ ಅಂತ್ಯಕ್ಕೆ 178.5 ಓವರ್ಗಳಲ್ಲಿ 571 ರನ್ಗಳಿಗೆ ಆಲೌಟ್ ಆಯಿತು. ಬಳಿಕ 2ನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ 6 ಓವರ್ಗಳಲ್ಲಿ ಕೇವಲ 3 ರನ್ ಗಳಿಸಿ 88 ರನ್ಗಳ ಹಿನ್ನಡೆಯಲ್ಲಿದೆ.
ಆರಂಭಿಕರಾದ ಟ್ರಾವಿಸ್ ಹೆಡ್ (Travis Head) 18 ಎಸೆತಗಳಲ್ಲಿ 3 ರನ್ ಗಳಿಸಿದರೆ, ಮತ್ತೋರ್ವ ಆರಂಭಿಕ ಮ್ಯಾಥಿವ್ ಕುನ್ಹೆಮನ್ ಯಾವುದೇ ರನ್ಗಳಿಸದೇ ವಿಕೆಟ್ ಉಳಿಸಿಕೊಂಡಿದ್ದು, ಸೋಮವಾರ ಬ್ಯಾಟಿಂಗ್ ಮುಂದುವರಿಸಲಿದ್ದಾರೆ.
ಶತಕದ ಬರ ನೀಗಿಸಿಕೊಂಡ ಕೊಹ್ಲಿ: 4ನೇ ದಿನ ಆಸ್ಟ್ರೇಲಿಯಾ ವಿರುದ್ಧ ತಾಳ್ಮೆಯ ಆಟವಾಡಿದ ಕೊಹ್ಲಿ 1,205 ದಿನಗಳ ಬಳಿಕ ಟೆಸ್ಟ್ನಲ್ಲಿ ಶತಕ ಸಿಡಿಸಿ ಮಿಂಚಿದರು. ಈ ಮೂಲಕ ತಮ್ಮ ವೃತ್ತಿಜೀವನದ 75ನೇ ಶತಕ ಪೂರ್ಣಗೊಳಿಸಿದರು.
3ನೇ ದಿನದ ಅಂತ್ಯಕ್ಕೆ 128 ಎಸೆತಗಳಲ್ಲಿ 59 ರನ್ ಗಳಿಸಿದ್ದ ಕೊಹ್ಲಿ 4ನೇ ದಿನ ಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. 4ನೇ ದಿನದಾಟದಲ್ಲಿ ಕೊಹ್ಲಿ 364 ಎಸೆತಗಳಲ್ಲಿ 15 ಬೌಂಡರಿಗಳೊಂದಿಗೆ 186 ರನ್ ಗಳಿಸಿದರೆ, ಜೊತೆಯಾಗಿ ಸಾಥ್ ನೀಡಿದ ಆಲ್ರೌಂಡರ್ ಅಕ್ಷರ್ ಪಟೇಲ್ (Axar Patel) 113 ಎಸೆತಗಳಲ್ಲಿ 79 ರನ್ (5 ಬೌಂಡರಿ, 4 ಸಿಕ್ಸರ್) ಬಾರಿಸಿದರು.
ರವೀಂದ್ರ ಜಡೇಜಾ 28 ರನ್, ಶ್ರೀಕರ್ ಭರತ್ 44 ರನ್, ರವಿಚಂದ್ರನ್ ಅಶ್ವಿನ್ 7 ರನ್ ಗಳಿಸಿದರೆ, ಉಮೇಶ್ ಯಾದವ್ ಒಂದು ಎಸೆತವನ್ನೂ ಎದುರಿಸದೇ ರನೌಟ್ ಆಗಿ ನಿರ್ಗಮಿಸಿದರು. ಮೊಹಮ್ಮದ್ ಶಮಿ ಅಜೇಯರಾಗುಳಿದರು.
ಆಸ್ಟ್ರೇಲಿಯಾ ತಂಡದ ಪರ ನಥನ್ ಲಿಯಾನ್ (Nathan Lyon), ಟಾಡ್ ಮರ್ಫಿ ತಲಾ 3 ವಿಕೆಟ್ ಪಡೆದರೆ, ಮಿಚೆಲ್ ಸ್ಟಾರ್ಕ್, ಮ್ಯಾಥಿವ್ ಕುನ್ಹೆಮನ್ ತಲಾ ಒಂದೊಂದು ವಿಕೆಟ್ ಪಡೆದರು.