ಇದೇ ಮೊದಲ ಭಾರಿಗೆ ದೊಡ್ಮನೆ ಕುಟುಂಬದ ದಂಪತಿ ಡಿವೋರ್ಸ್ ಕಾರಣಕ್ಕೆ ಕೋರ್ಟ್ ಮೆಟ್ಟಿಲೇರಿದ್ದಾರೆ. 7 ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ಯುವ ಹಾಗೂ ಶ್ರೀದೇವಿ ಮದುವೆಯಾದ ನಾಲ್ಕೇ ವರ್ಷಕ್ಕೆ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದೀಗ ಡಿವೋರ್ಸ್ ಕುರಿತು ಶ್ರೀದೇವಿ ಪ್ರತಿಕ್ರಿಯೆ ನೀಡಿದ್ದಾರೆ.
ವಿಷಯ ಏನೆಂದು ಚಿತ್ರರಂಗದ ಹಾಗೂ ಮಾಧ್ಯಮದಲ್ಲಿ ಅನೇಕರಿಗೆ ತಿಳಿದಿದೆ. ನಾನು ಈಗಾಗಲೇ ಲೀಗಲ್ ನೋಟಿಸ್ ಗೆ ಉತ್ತರಿಸಿದ್ದೇನೆ. ವಿಚ್ಚೇದನದ ಅರ್ಜಿಯು ನನ್ನ ಕೈಗೆ ತಲುಪಿಲ್ಲ. ಸಿಕ್ಕಾಗ ನ್ಯಾಯಾಲಯಕ್ಕೆ ನಾನು ಉತ್ತರಿಸುತ್ತೇನೆ. ಸದ್ಯಕ್ಕೆ ನಾನು ಮಾತನಾಡುವ ಮಾನಸೀಕ ಪರಿಸ್ಥಿತಿಯಲ್ಲಿ ಇಲ್ಲ ಎಂದು ಶ್ರೀದೇವಿ ಹೇಳಿದ್ದಾರೆ.
2019ರಲ್ಲಿ ಯುವ ರಾಜ್ಕುಮಾರ್ ಮತ್ತು ಶ್ರೀದೇವಿ ಪ್ರೀತಿಸಿ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆ ಆಗಿದ್ದರು. ಆದರೆ ಇತ್ತೀಚಿನ ಕೆಲವು ತಿಂಗಳಿಂದ ಇಬ್ಬರ ನಡುವೆ ಮನಸ್ತಾಪ ಹೆಚ್ಚಾಗಿದೆ. ಸಾರ್ವಜನಿಕವಾಗಿ ಈ ವಿಷಯ ಬಹಿರಂಗ ಆಗದೇ ಇದ್ದರೂ ಕೂಡ ಆಪ್ತ ವಲಯದಲ್ಲಿ ಗುಸುಗುಸು ಕೇಳಿಬರುತ್ತಿತ್ತು. ಕಡೆಗೂ ಸಂಸಾರದ ಬಿರುಕು ಬಹಿರಂಗವಾಗಿದ್ದು ಇದೀಗ ಇಬ್ಬರು ಕೋರ್ಟ್ ಮೆಟ್ಟಿಲೇರಿದ್ದಾರೆ.
ಮನಸ್ತಾಪ ಹೆಚ್ಚಿದ ಬಳಿಕ ಶ್ರೀದೇವಿ ಅವರು ವಿದೇಶಕ್ಕೆ ತೆರಳಿದರು. ಕಳೆದ ಕೆಲವು ತಿಂಗಳಿಂದ ಅವರು ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ. ಯುವ ರಾಜ್ಕುಮಾರ್ ನಟಿಸಿದ ‘ಯುವ’ ಸಿನಿಮಾ ಈ ವರ್ಷ ಬಿಡುಗಡೆ ಆಯಿತು. ಆ ಸಿನಿಮಾಗೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮಗಳಲ್ಲೂ ಪತ್ನಿ ಶ್ರೀದೇವಿ ಕಾಣಿಸಿಕೊಳ್ಳದೇ ಇರುವುದು ಕೂಡ ಸಾಕಷ್ಟು ಅನುಮಾನಕ್ಕೆ ಕಾರಣವಾಗಿತ್ತು.
ಮೂಲಗಳ ಪ್ರಕಾರ, ಯುವ ರಾಜ್ಕುಮಾರ್ ಅವರು ಕನ್ನಡ ಚಿತ್ರರಂಗದ ಖ್ಯಾತ ನಟಿಯೊಬ್ಬರ ಜೊತೆ ಸ್ನೇಹ ಬೆಳೆಸಿಕೊಂಡಿದ್ದಾರೆ. ಆ ನಟಿಯ ಜೊತೆ ಯುವ ಆಪ್ತತೆ ಹೆಚ್ಚಾಗಿದ್ದು, ಇದೇ ಕಾರಣದಿಂದಲೇ ಅವರ ಸಂಸಾರದಲ್ಲಿ ಸಮಸ್ಯೆ ಶುರುವಾಗಿದೆ ಎನ್ನಲಾಗುತ್ತಿದೆ.