ದೊಡ್ಮನೆ ಕುಟುಂಬದ ಕುಡಿಯ ದಾಂಪತ್ಯ ಜೀವನ ಬೀದಿಗೆ ಬಿದ್ದಿದೆ. ಗಂಡ, ಹೆಂಡಿರಿಬ್ಬರು ಒಬ್ಬರ ಮೇಲೊಬ್ಬರಂತೆ ಆರೋಪ ಮಾಡುತ್ತಿದ್ದಾರೆ. ಪತ್ನಿಯಿಂದ ಕಿರುಕುಳ ಆಗುತ್ತಿದೆ ಎಂದು ಯುವ ಆರೋಪಿಸಿದ್ದಾರೆ. ಯುವ ಪರ ವಕೀಲರು ಸುದ್ದಿಗೋಷ್ಠಿ ನಡೆಸಿ ಶ್ರೀದೇವಿ ವಿರುದ್ಧ ಸಾಕಷ್ಟು ಆರೋಪಗಳನ್ನು ಮಾಡಿದ್ದಾರೆ. ಶ್ರೀದೇವಿಗೆ ಅನೈತಿಕ ಸಂಬಂಧವಿದೆ, ರಾಜ್ಕುಮಾರ್ ಅಕಾಡೆಮಿಯಲ್ಲಿ ಅವ್ಯವಹಾರ ಮಾಡಿದ್ದಾರೆ ಎಂಬಿತ್ಯಾದಿ ಆರೋಪ ಹೊರಿಸಿದ್ದಾರೆ. ಈ ಆರೋಪಗಳಿಗೆ ಶ್ರೀದೇವಿ ತಿರುಗೇಟು ನೀಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿದ್ದ ಯುವ ಪರ ವಕೀಲರು, ‘ಶ್ರೀದೇವಿ ಅವರು ಯುವಗೆ ಟಾರ್ಚರ್ ಮಾಡಿದ್ದಾರೆ. ರಾಜ್ಕುಮಾರ್ ಅಕಾಡೆಮಿಯಿಂದ ಪರ್ಸನಲ್ ಅಕೌಂಟ್ಗೆ 3 ಕೋಟಿ ರೂಪಾಯಿ ಟ್ರಾನ್ಸಫರ್ ಮಾಡಿಕೊಂಡಿದ್ದಾರೆ. ನಿನ್ನನ್ನು ಬೀದಿಗೆ ತರುತ್ತೇನೆ ಎಂದು ಪತಿಗೆ ಬೆದರಿಸಿದ್ದಾರೆ. ಯುವನ ಬಳಿಕ ಅಮೆರಿಕಕ್ಕೆ ಬರುವಂತೆ ಒತ್ತಾಯ ಮಾಡಿದ್ದರು. ಬಾಯ್ಫ್ರೆಂಡ್ ಮೂಲಕ ಮಗು ಪಡೆಯೋ ಆಲೋಚನೆಯಲ್ಲಿ ಅವರಿದ್ದರು. ರಾಧಯ್ಯ ಅನ್ನೋದು ಶ್ರೀದೇವಿ ಬಾಯ್ಫ್ರೆಂಡ್ ಹೆಸರು’ ಎಂದು ಆರೋಪಿಸಿದ್ದರು.
ಇದಕ್ಕೆ ತಿರುಗೇಟು ನೀಡಿದ ಶ್ರೀದೇವಿ, ‘ವೃತ್ತಿಪರ ಸೌಹಾರ್ದತೆಯನ್ನು ಕಾಯ್ದುಕೊಳ್ಳಬೇಕಾದ ವ್ಯಕ್ತಿಯೇ ಸಾರ್ವಜನಿಕವಾಗಿ ಒಂದು ಹೆಣ್ಣಿನ ಚಾರಿತ್ಯದ ಬಗ್ಗೆ ಕೀಳು ಮಟ್ಟದ ಸುಳ್ಳು ಆರೋಪಗಳನ್ನು ಮಾಡುತ್ತಿರುವುದು ಅತ್ಯಂತ ದುರದೃಷ್ಟಕರ ಹಾಗೂ ಬಹಳ ನೋವುಂಟು ಮಾಡಿದೆ’ ಎಂದು ಫೇಸ್ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
‘ಕಳೆದ ಕೆಲವು ತಿಂಗಳಿಂದ ಆದ ಅನೇಕ ನೋವುಗಳ ಹೊರತಾಗಿಯೂ ನಾನು ಕುಟುಂಬದ ಗೌರವ ಕಾಪಾಡಿಕೊಳ್ಳಲು ಮೌನವಾಗಿದ್ದೆ. ಆದರೆ, ನನ್ನ ಸಭ್ಯತೆ ಹಾಗೂ ಮಾನವೀಯತೆಗಳನ್ನು ಗೌರವಿಸದೆ ಕೀಳು ಮಟ್ಟದ ಆರೋಪಗಳನ್ನು ಮಾಡುತ್ತಿರುವುದು ದುರದೃಷ್ಟಕರ. ಸತ್ಯ ಮತ್ತು ನ್ಯಾಯವು ಖಂಡಿತ ಮೇಲುಗೈ ಸಾಧಿಸುತ್ತದೆ ಎಂದು ನಾನು ನಂಬಿದ್ದೇನೆ’ ಎಂದು ಹೇಳಿದ್ದಾರೆ.