ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಹಾಗೂ ನಟ ಝಹೀರ್ ಇಖ್ಬಾಲ್ ಮದುವೆ ಆಗುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಜೂನ್ 23ರಂದು ಮುಂಬೈನಲ್ಲಿ ವಿವಾಹಕ್ಕೆ ಸಿದ್ದತೆ ನಡೆಯುತ್ತಿದೆ. ಈ ಬಗ್ಗೆ ಸೋನಾಕ್ಷಿ ತಂದೆಗೆ ಅಸಮಾಧಾನ ಇದ್ದಂತೆ ಕಂಡಿದ್ದು, ಮಗಳು ಕರೆದರೆ ಮದುವೆಗೆ ಹೋಗಿ ಆಶೀರ್ವದಿಸಿ ಬರುತ್ತೇನೆ ಎಂದಿದ್ದಾರೆ.
‘ನಾನೀಗ ದೆಹಲಿಯಲ್ಲಿದ್ದೇನೆ. ಚುನಾವಣಾ ಫಲಿತಾಂಶದ ನಂತರ ನಾನು ಇಲ್ಲಿಗೆ ಬಂದೆ. ನನ್ನ ಮಗಳ ಬಗ್ಗೆ, ಅವಳ ಯೋಜನೆಗಳ ಬಗ್ಗೆ ನಾನು ಯಾರೊಂದಿಗೂ ಮಾತನಾಡಿಲ್ಲ. ಅವಳು ಮದುವೆ ಬಗ್ಗೆ ನನಗೆ ಏನನ್ನೂ ಹೇಳಿಲ್ಲ. ಮಾಧ್ಯಮದಲ್ಲಿ ಏನು ವರದಿ ಆಗಿದೆಯೋ ನನಗೂ ಅಷ್ಟೇ ತಿಳಿದಿದೆ. ಅವಳು ನಮಗೆ ಆಮಂತ್ರಣ ನೀಡಿದರೆ ನಾನು ಮತ್ತು ನನ್ನ ಹೆಂಡತಿ ಹೋಗಿ ಆಶೀರ್ವಾದ ಮಾಡುತ್ತೇವೆ. ಅವಳ ಸಂತೋಷವನ್ನು ನಾವು ಬಯಸುತ್ತೇವೆ’ ಎಂದು ಶತ್ರುಘ್ನ ಸಿನ್ಹಾ ಹೇಳಿದ್ದಾರೆ.
‘ನಮ್ಮ ಮಗಳ ನಿರ್ಧಾರದ ಬಗ್ಗೆ ನಮಗೆ ನಂಬಿಕೆ ಇದೆ. ಅವಳು ಎಂದಿಗೂ ಸಂವಿಧಾನೇತರ ಅಥವಾ ಕಾನೂನುಬಾಹಿರ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಅವಳು ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಹೊಂದಿದ್ದಾಳೆ. ನನ್ನ ಮಗಳ ಮದುವೆಯಲ್ಲಿ ಡ್ಯಾನ್ಸ್ ಮಾಡೋಕೆ ನಾನು ಇಷ್ಟಪಡುತ್ತೇನೆ’ ಎಂದಿದ್ದಾರೆ.
‘ಎಲ್ಲರೂ ನನಗೆ ಕರೆ ಮಾಡಿ ಮದುವೆ ಬಗ್ಗೆ ಕೇಳಿದರು. ಮಾಧ್ಯಮದವರಿಗೆ ಈ ಬಗ್ಗೆ ಗೊತ್ತು, ಆದರೆ ನನಗೆ ಈ ಬಗ್ಗೆ ಗೊತ್ತಿಲ್ಲ. ನಮಗೆ ಅವಳು ಮಾಹಿತಿ ನೀಡಲಿ ಎಂದು ಕಾಯುತ್ತಿದ್ದೇನೆ’ ಎನ್ನುವ ಮೂಲಕ ಮಗಳ ಮದುವೆ ಕುರಿತು ಅಸಮಾಧಾನ ಹೊರ ಹಾಕಿದ್ದಾರೆ.