ನವದೆಹಲಿ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET-UG)2024ರ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಸಲ್ಲಿಸಲಾದ ಮನವಿಗೆ ಪ್ರತಿಕ್ರಿಯೆ ಕೋರಿ ಸುಪ್ರೀಂಕೋರ್ಟ್ ಮಂಗಳವಾರ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ)ಗೆ ನೋಟಿಸ್ ಜಾರಿ ಮಾಡಿದೆ.
ನೀಟ್ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ 10 ಅಭ್ಯರ್ಥಿಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯವು ಪರೀಕ್ಷೆಯ ಪಾವಿತ್ರ್ಯತೆಗೆ ಧಕ್ಕೆಯಾಗಿದೆ ಎಂದು ನಾವು ಭಾವಿಸುತ್ತೇವೆ. ಪತ್ರಿಕೆ ಸೋರಿಕೆ ಆರೋಪದ ಬಗ್ಗೆ ನಮಗೆ ಎನ್ಟಿಎಯಿಂದ ಉತ್ತರ ಬೇಕು ಎಂದು ಹೇಳಿದೆ.
ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಅಹ್ಸಾನುದ್ದೀನ್ ಅಮಾನುಲ್ಲಾ ಅವರ ರಜಾಕಾಲದ ಪೀಠವು, ಪರೀಕ್ಷೆಯನ್ನು ರದ್ದುಗೊಳಿಸಲಾಗುವುದಿಲ್ಲ ಅಥವಾ ಕೌನ್ಸೆಲಿಂಗ್ ಅನ್ನು ನಿಷೇಧಿಸಲಾಗುವುದಿಲ್ಲ ಎಂದು ಹೇಳಿ ಕೌನ್ಸೆಲಿಂಗ್ ಮತ್ತು ಪರೀಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿದೆ. ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಜುಲೈ 8ಕ್ಕೆ ನಿಗದಿಪಡಿಸಿದೆ.
NEET ಯುಜಿ ಪರೀಕ್ಷೆಯು ಮೇ 5ರಂದು ನಡೆಯಿತು. ಪರೀಕ್ಷೆಯ ಫಲಿತಾಂಶವು ಜೂನ್ 4ರಂದು ಬಿಡುಗಡೆಯಾಯಿತು. ಈ ಪರೀಕ್ಷೆಯಲ್ಲಿ 67 ವಿದ್ಯಾರ್ಥಿಗಳು ಅಗ್ರಸ್ಥಾನ ಪಡೆದ ಕಾರಣ ಫಲಿತಾಂಶದ ಬಗ್ಗೆ ದೂರುಗಳು ಬಂದವು. ಕಳೆದ 2-3 ವರ್ಷಗಳಲ್ಲಿ ಕೇವಲ 3-4 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ, ಆದರೆ ಈ ಬಾರಿ ಟಾಪರ್ಗಳ ಸಂಖ್ಯೆ ಪರೀಕ್ಷೆಯಲ್ಲಿ ಅಕ್ರಮಗಳತ್ತ ಬೊಟ್ಟು ಮಾಡಿದೆ.
ಫಲಿತಾಂಶದ ನಂತರ ಎನ್ಟಿಎ ಪೇಪರ್ ಸೋರಿಕೆ ಆರೋಪ ಎದುರಿಸುತ್ತಿದೆ. ಎನ್ಟಿಎ ತನ್ನ ಕೆಲವು ಕೇಂದ್ರಗಳಲ್ಲಿ ಪತ್ರಿಕೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಒಪ್ಪಿಕೊಂಡಿದೆ. ಆದರೆ ಪೇಪರ್ ಸೋರಿಕೆ ವಿಚಾರವನ್ನು ಎನ್ಟಿಎ ತಿರಸ್ಕರಿಸಿದೆ. ನೀಟ್ ಯುಜಿ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಶಿವಂಗಿ ಮಿಶ್ರಾ ಮತ್ತು ಇತರ 9 ಜನರು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಎಲ್ಲ 10 ಅರ್ಜಿದಾರರು ನೀಟ್ ಯುಜಿ ಪರೀಕ್ಷೆಯನ್ನು ಮರು ನಡೆಸುವಂತೆ ಒತ್ತಾಯಿಸಿದ್ದರು. (ಏಜೆನ್ಸೀಸ್)