ಅಭಿಮಾನಿಗಳ ಪಾಲಿನ ಆರಾಧ್ಯ ದೈವ, ದೇವರಂತೆ ಆರಾಧಿಸುವ ಕೋಟ್ಯಾಂತರ ಅಭಿಮಾನಿಗಳ ದಾಸ ದರ್ಶನ್ ಇಂದು ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ. ಗೆಳತಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್ ಮಾಡಲಾಗಿದೆ ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿ ಅವರನ್ನು ಕೊಲೆ ಮಾಡಲಾಗಿದೆ. ರೇಣುಕಾ ಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು 13 ಮಂದಿಯನ್ನ ಪೊಲೀಸರು ಬಂಧಿಸಿದ್ದಾರೆ.
ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಆರೋಪಿ ನಂಬರ್ 1 ಪವಿತ್ರಾ ಗೌಡ ಆಗಿದ್ದಾರೆ. ಕ್ರಿಮಿನಲ್ ಒಳಸಂಚು ಆರೋಪದಡಿಯಲ್ಲಿ ಪವಿತ್ರಾ ಗೌಡ ಅವರನ್ನ ಅರೆಸ್ಟ್ ಮಾಡಲಾಗಿದ್ದು, ಪ್ರಕರಣದಲ್ಲಿ ಎ1 ಆರೋಪಿಯಾಗಿದ್ದಾರೆ.
ಪ್ರಕರಣದ ಎ2 ಆರೋಪಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗಿದ್ದಾರೆ. ಹತ್ಯೆ ಕೇಸ್ನಲ್ಲಿ ದರ್ಶನ್ ಅವರನ್ನ ಪ್ರಮುಖ ಆರೋಪಿಯನ್ನಾಗಿ ಮಾಡಲಾಗಿದೆ.
ಇನ್ನೂ ವಿಚಾರಣೆ ವೇಳೆ ಪೊಲೀಸರ ಮುಂದೆ ‘’ನಾನೇನೂ ಮಾಡಿಲ್ಲ. ನಂಗೇನೂ ಗೊತ್ತಿಲ್ಲ’’ ಎಂದು ದರ್ಶನ್ ಹೇಳಿಕೆ ಕೊಟ್ಟಿದ್ದಾರಂತೆ. ಪತ್ನಿ ವಿಜಯಲಕ್ಷ್ಮೀ ಹಾಗೂ ವಿನೀಶ್ ಜೊತೆ ಫೋನ್ನಲ್ಲಿ ದರ್ಶನ್ ಮಾತನಾಡಿದ್ದಾರೆ ಎನ್ನಲಾಗಿದೆ. ಪತ್ನಿ ಹಾಗೂ ಮಗನ ಜೊತೆಗೂ ‘’ನಾನೇನೂ ಮಾಡಿಲ್ಲ’’ ಅಂತಲೇ ಹೇಳಿದ್ದಾರೆ ಎನ್ನಲಾಗುತ್ತಿದೆ.
ರೇಣುಕಾ ಸ್ವಾಮಿ ಹತ್ಯೆ ಕೇಸ್ನಲ್ಲಿ ಪವಿತ್ರಾ ಗೌಡ ಎ1, ದರ್ಶನ್ ಎ2, ವಿ.ವಿನಯ್, ಆರ್.ನಾಗರಾಜು, ಎಂ.ಲಕ್ಷ್ಮಣ್, ಎಸ್.ಪ್ರದೋಶ್, ಕೆ.ಪವನ್, ದೀಪಕ್ ಕುಮಾರ್, ನಂದೀಶ್, ಕಾರ್ತಿಕ್, ನಿಖಿಲ್ ನಾಯಕ್, ಕೇಶವಮೂರ್ತಿ, ರಾಘವೇಂದ್ರ ಅಲಿಯಾಸ್ ರಾಘು ಅವರುಗಳನ್ನು ಬಂಧಿಸಲಾಗಿದೆ.