ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರ ವಶದಲ್ಲಿರುವ ನಟ ದರ್ಶನ್ ಹಾಗೂ ಇತರೇ ಆರೋಪಿಗಳಿಗೆ ಬಿರಿಯಾನಿ ನೀಡಿರುವ ಕುರಿತ ವರದಿಗಳು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಿಗೆ ಪೊಲೀಸ್ ಕಸ್ಟಡಿಯಲ್ಲಿ ಬಿರಿಯಾನಿ ನೀಡಿರುವುದು ಎಷ್ಟು ಸರಿ ಎಂದು ಸಾಕಷ್ಟು ಮಂದಿ ಪ್ರಶ್ನೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. ಈ ಕುರಿತಂತೆ ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ಪೊಲೀಸರು ಆರೋಪಿಗಳಿಗೆ ಯಾವ ಊಟ ನೀಡಿದ್ದಾರೆ ನನಗೆ ಗೊತ್ತಿಲ್ಲ. ಆದರೆ ಆರೋಪಿಗಳನ್ನು ಊಟ ಇಲ್ಲದೆ ಸಾಯಿಸುವುದಕ್ಕೆ ಆಗಲ್ಲ ಅಲ್ವಾ? ನಿಯಮಗಳಂತೆ ಪೊಲೀಸರು ಊಟ ತರಿಸಿ ಕೊಡುತ್ತಾರೆ. ಅದರಲ್ಲಿ ಬಿರಿಯಾನಿ ತರಿಸಿಕೊಟ್ರಾ? ಚಿಕನ್ ತರಿಸಿಕೊಟ್ರಾ ಅಂತ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಸದ್ಯ ನಟ ದರ್ಶನ್ ಅವರನ್ನು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಅಧಿಕಾರಿಗಳು ಕರೆದುಕೊಂಡು ಬಂದಿದ್ದಾರೆ. ಅರೆಸ್ಟ್ ಮಾಡಿದ್ದಾರೆ, ಪ್ರಕರಣದ ತನಿಖೆ ಮಾಡ್ತಿದ್ದಾರೆ. ತನಿಖೆಯಲ್ಲಿ ಏನ್ ವಿಚಾರ ಬರುತ್ತದೆ ಅದರ ಮೇಲೆ ಪೊಲೀಸರು ಕ್ರಮ ತಗೊಳ್ತಾರೆ. ಕಾನೂನು ಎಲ್ಲರಿಗೂ ಒಂದೇ, ಪರಮೇಶ್ವರ್ ಗೂ ಒಂದೇ, ದರ್ಶನ್ ಗೂ ಒಂದೇ ಎಂದು ಗೃಹ ಸಚಿವರು ಹೇಳಿದರು.
ಮೃತಪಟ್ಟಿರುವ ಹುಡುಗ ರೇಣುಕಸ್ವಾಮಿ ನಟ ದರ್ಶನ್ ಅವರ ಗೆಳತಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಫೋಸ್ಟ್ ಮಾಡಿದ್ದನಂತೆ. ಆ ರೀತಿ ಮಾಡಿದ್ದರೆ ಅದರ ಬಗ್ಗೆ ಅವರು ದೂರು ಕೊಡಬಹುದಿತ್ತು. ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದರು. ಅವರನ್ನು ಕರೆದುಕೊಂಡು ಹೊಡೆದು ಸಾಯಿಸಿದ್ದಾರೆ ಎಂಬ ಮಾಹಿತಿ ಇದೆ. ಹೀಗಾಗಿ ಪೊಲೀಸರು ತನಿಖೆ ಮಾಡ್ತಿದ್ದಾರೆ, ಕಾನೂನಿನ ರೀತಿಯಲ್ಲಿ ಏನು ಕ್ರಮ ತಗೊಬೇಕೋ ಅದನ್ನು ಪೊಲೀಸರು ತಗೊಳ್ತಾರೆ. ರೇಣುಕಾಸ್ಚಾಮಿ ಕುಟುಂಬದವರ ಜೊತೆ ಸರ್ಕಾರ ನಿಲ್ಲುವ ವಿಚಾರವಾಗಿ ನಾನು ಸಿಎಂ ಜೊತೆ ಮಾತಾಡ್ತೀನಿ, ಅವರಿಗೆ ಏನು ಮಾಡಬೇಕೆಂದು ಚರ್ಚಿಸಿ ಸೂಕ್ತ ತೀರ್ಮಾನ ಮಾಡ್ತೀವಿ ಎಂದು ಭರವಸೆ ನೀಡಿದರು.