ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದಾರೆ ಎಂಬ ಕಾರಣಕ್ಕೆ ರೇಣುಕಾಸ್ವಾಮಿ ಎಂಬುವವರನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಮತ್ತವರ ಗ್ಯಾಂಗ್ ಹತ್ಯೆ ಮಾಡಿದೆ. ನಿನ್ನೆ ಕೋರ್ಟ್ ದರ್ಶನ್ ಹಾಗೂ ಸಹಚರರನ್ನು ಪೊಲೀಸ್ ಕಸ್ಟಡಿಗೆ ನೀಡಿದ ಬಳಿಕ ಸಾಕಷ್ಟು ವಿಚಾರಣೆ ನಡೆಸಲಾಯಿತು. ಇದಾದ ಮೇಲೆ ರೇಣುಕಾಸ್ವಾಮಿ ಅವರ ಕೊಲೆ ನಡೆದಿದೆ ಎನ್ನಲಾದ ಸ್ಥಳಕ್ಕೆ ಕರೆದುಕೊಂಡು ಹೋಗಿ ಸ್ಥಳ ಮಹಾಜರು ಮಾಡಿದ್ದಾರೆ.
ಆರ್.ಆರ್ ನಗರದ ಪಟ್ಟಣಗೆರೆಯ ಶೆಡ್ನಲ್ಲಿ ರೇಣುಕಾಸ್ವಾಮಿ ಅವರನ್ನು ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಕೊಲೆ ಕೇಸ್ನಲ್ಲಿ ಸಾಕ್ಷಿ ಕಲೆಹಾಕುತ್ತಿರುವ ಪೊಲೀಸರು ಇದೀಗ ನಟ ದರ್ಶನ್ ಹಾಗೂ ಮತ್ತವರ ಗ್ಯಾಂಗ್ ಅನ್ನು ಪಟ್ಟಣಗೆರೆಯ ಶೆಡ್ಗೆ ಕರೆದುಕೊಂಡು ಹೋಗಿ ಸ್ಥಳದ ಮಹಾಜರು ನಡೆಸಿದ್ದಾರೆ.
ಪಟ್ಟಣಗೆರೆಯ ಶೆಡ್ನಲ್ಲಿ ನಟ ದರ್ಶನ್, ಎ1 ಪವಿತ್ರಾ ಗೌಡ ಅವರನ್ನು ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಲಾಗಿದೆ. ಸ್ಥಳ ಮಹಜರು ಮಾಡುವ ವೇಳೆ ನಟ ದರ್ಶನ್ ಅವರು ಕೈ ಕಟ್ಟಿಕೊಂಡು ನಿಂತಿದ್ದರು. ದರ್ಶನ್ ಅವರ ಪಕ್ಕದಲ್ಲೇ ಪವಿತ್ರಾ ಗೌಡ ಅವರು ನಿಂತಿದ್ದು, ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.
ದರ್ಶನ್, ಪವಿತ್ರಗೌಡ ಸೇರಿ ನಾಲ್ವರು ಆರೋಪಿಗಳನ್ನು ಪೊಲೀಸರು ಆರ್.ಆರ್.ನಗರದ ಶೆಡ್ಗೆ ಕರೆದುಕೊಂಡು ಹೋಗಿದ್ದಾರೆ. ನಟ ದರ್ಶನ್ ಹಾಗೂ ಇತರೆ ಆರೋಪಿಗಳು ಶೆಡ್ನಲ್ಲಿ ಕೊಲೆಯಾದ ದಿನ ಅಸಲಿಗೆ ಏನಾಯ್ತು. ರೇಣುಕಾಸ್ವಾಮಿ ಅವರನ್ನು ಕರೆದುಕೊಂಡು ಬಂದವರು ಯಾರು? ರೇಣುಕಾಸ್ವಾಮಿ ಬಂದ ಮೇಲೆ ಏನೆಲ್ಲಾ ನಡೀತು ಅನ್ನೋ ಇಂಚಿಂಚು ಮಾಹಿತಿಯನ್ನು ಆರೋಪಿಗಳಿಂದ ಕಲೆ ಹಾಕುತ್ತಿದ್ದಾರೆ. ಕೊಲೆಯಾದ ಶೆಡ್ನಲ್ಲಿ ಆರೋಪಿಗಳನ್ನು ಒಟ್ಟಿಗೆ ಮಹಜರು ಮಾಡಲು ಕರೆದುಕೊಂಡು ಬಂದಿದ್ದು ಈ ವೇಳೆಸಾಕಷ್ಟು ಮಾಹಿತಿಯನ್ನು ಕಲೆ ಹಾಕಿದ್ದಾರೆ.