ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಕ ಜಿ.ಆರ್. ಫಾರ್ಮ್ಹೌಸ್ನಲ್ಲಿ ರೇವ್ ಪಾರ್ಟಿ ಮಾಡಿದ್ದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ತೆಲುಗು ನಟಿ ಹೇಮಾಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಎನ್ಡಿಪಿಎಸ್ ವಿಶೇಷ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ಪ್ರಕರಣದಲ್ಲಿ ಹೇಮಾ ಅವರನ್ನು ಜೂನ್ 14ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಜಾಮೀನಿಗಾಗಿ ಅವರು ಅರ್ಜಿ ಸಲ್ಲಿಸಿದ್ದರು. ಇದೀಗ ಹೇಮಾಗೆ ಜಾಮೀನು ಸಿಕ್ಕಿದೆ.
ಬೆಂಗಳೂರು ಗ್ರಾಮಾಂತರ ಎನ್ಡಿಪಿಎಸ್ ವಿಶೇಷ ಕೋರ್ಟ್ನಿಂದ ನಟಿ ಹೇಮಾಗೆ ಜಾಮೀನು ನೀಡಲಾಗಿದೆ. ಹೇಮಾಳಿಂದ ಯಾವುದೇ ಮಾದಕವಸ್ತು ವಶಕ್ಕೆ ಪಡೆಯಲಾಗಿಲ್ಲ. ಹಲವು ದಿನಗಳ ನಂತರ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ ಎಂದು ಹೇಮಾ ಪರ ವಕೀಲ ಮಹೇಶ್ ಕಿರಣ್ ಶೆಟ್ಟಿ ವಾದ ಮಾಡಿದ್ದಾರೆ. ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಕೋರ್ಟ್ ಆದೇಶಿಸಿದೆ.
ಕೆಲವು ದಿನಗಳ ಹಿಂದೆ ಸಿಸಿಬಿ ಪೊಲೀಸರು ಜೆ.ಆರ್. ಫಾರ್ಮ್ಹೌಸ್ ಮೇಲೆ ದಾಳಿ ನಡೆಸಿದಾಗ ತೆಲುಗು ನಟಿ ಹೇಮಾ ಸಿಕ್ಕಿಬಿದ್ದಿದ್ದರು. ಆ ಸುದ್ದಿ ಹೊರಬಿದ್ದಾಗ ಅದೇ ಫಾರ್ಮ್ಹೌಸ್ನಿಂದಲೇ ವಿಡಿಯೋ ರೆಕಾರ್ಡ್ ಮಾಡಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹೇಮಾ ಹರಿಬಿಟ್ಟಿದ್ದರು. ತಾವು ಹೈದರಾಬಾದ್ನಲ್ಲಿ ಇರುವುದಾಗಿ ಬಿಂಬಿಸಲು ಆ ವಿಡಿಯೋ ಮೂಲಕ ಹೇಮಾ ಪ್ರಯತ್ನಿಸಿದ್ದರು. ಆದರೆ ಡ್ರಗ್ಸ್ ಪಡೆದಿರುವ ಬಗ್ಗೆ ಪಾಸಿಟಿವ್ ರಿಪೋರ್ಟ್ ಬಂದ ಬೆನ್ನಲ್ಲೇ ನಟಿಗೆ 2 ಬಾರಿ ನೋಟಿಸ್ ಪೊಲೀಸರು ನೀಡಿದ್ದರು.
ವಿಚಾರಣೆಗೆ ಬಂದ ಹೇಮಾರನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಜೂನ್ 14ರವರೆಗೆ ನಾಲ್ಕನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಮ್ಎಫ್ಸಿ ನ್ಯಾಯಾಧೀಶರಾದ ಸಲ್ಮಾ ಎ.ಎಸ್ ಅವರಿದ್ದ ಪೀಠ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿತ್ತು. ಈಗ ನಟಿಗೆ ಜಾಮೀನು ಸಿಕ್ಕಿದೆ.