ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರ ಮೈದುನ ನಿಕ್ ಜೋನಸ್ ಅವರ ಸಹೋದರ ಕೇವಿನ್ ಜೋನಸ್ ಅವರಿಗೆ ಚರ್ಮದ ಕ್ಯಾನ್ಸರ್ ಆಗಿದೆ. ಈ ಬಗ್ಗೆ ಶಾಕಿಂಗ್ ನ್ಯೂಸ್ ನೀಡಿರುವ ಕೇವಿನ್ ತಮಗಿರುವ ಕ್ಯಾನ್ಸರ್ ಕಾಯಿಲೆಯ ಬಗ್ಗೆ ವಿವರಣೆ ನೀಡಿದ್ದಾರೆ.
ಹಣೆಯ ಮೇಲೆ ಮಚ್ಚೆ ಗುರುತು ಕಂಡುಬಂದಿತು. ಆಮೇಲೆ ಅದು ಕ್ಯಾನ್ಸರ್ಗೆ ತಿರುಗಿತು ಎಂದಿರುವ ಕೇವಿನ್ ಅವರು ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳುವಂತೆ ಹೇಳಿದ್ದಾರೆ. ಇಬ್ಬರು ಮಕ್ಕಳ ತಂದೆಯಾಗಿರುವ ಕೇವಿನ್ ಅವರು ಹಾಲಿ ಆರೋಗ್ಯ ಸ್ಥಿತಿಯನ್ನು ಹೇಳಿದ್ದು, ಈ ರೀತಿಯ ಮಚ್ಚೆ ಕಂಡುಬಂದಾಗ ಜಾಗೃತೆ ವಹಿಸಿ ಎಂದಿದ್ದಾರೆ.
ಚರ್ಮದ ಮೇಲೆ ಕಂಡುಬರುವ ಗುಳ್ಳೆಗಳು, ಮಚ್ಚೆಗಳು, ಕಡು ಕಪ್ಪು ಬಣ್ಣದ ಚುಕ್ಕೆಗಳು ಎಲ್ಲವೂ ಕ್ಯಾನ್ಸರ್ ಅಲ್ಲದಿದ್ದರೂ ಇದನ್ನು ಇಷ್ಟಕ್ಕೆ ನಿರ್ಲಕ್ಷ್ಯ ಮಾಡುವುದು ಕೂಡ ಒಳ್ಳೆಯದಲ್ಲ. ಏಕೆಂದರೆ ಇದು ಯಾವುದೇ ಸಂದರ್ಭದಲ್ಲಿ ಕ್ಯಾನ್ಸರ್ ಸ್ವರೂಪಕ್ಕೆ ತಿರುಗಬಹುದು ಎಂದು ಇದಾಗಲೇ ವೈದ್ಯರು ಕೂಡ ಎಚ್ಚರಿಕೆ ಕೊಟ್ಟಿದ್ದು, ಗಾಯಕ ಕೂಡ ಅದನ್ನೇ ಹೇಳಿದ್ದಾರೆ. ಸದ್ಯ ನಾನು ಶಸ್ತ್ರಚಿಕಿತ್ಸೆಯ ಮೊರೆ ಹೋಗಿದ್ದೇನೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು ಚೇತರಿಸಿಕೊಳ್ಳುತ್ತಿದ್ದೇನೆ ಎಂದು ಕೇವಿನ್ ಹೇಳಿದ್ದಾರೆ.
ಅಮೆರಿಕನ್ ಅಕಾಡೆಮಿ ಆಫ್ ಡರ್ಮಟಾಲಜಿ ಹೇಳುವ ಪ್ರಕಾರ, ಈ ರೀತಿ ಬಣ್ಣ, ಗಾತ್ರ ಹಾಗೂ ಆಕಾರದಲ್ಲಿ ಬದಲಾಗುವ ಗುಳ್ಳೆಗಳು ಮೆಲನೋಮ ಲಕ್ಷಣಗಳಾಗಿದ್ದು, ಇದೊಂದು ಅತ್ಯಂತ ಕೆಟ್ಟ ಸ್ವರೂಪದ ಚರ್ಮದ ಕ್ಯಾನ್ಸರ್ ಆಗಿರುತ್ತದೆ. ಇಂತಹ ಸಂದರ್ಭದಲ್ಲಿ ವ್ಯಕ್ತಿಯು ಪ್ರತಿದಿನ ಮಚ್ಚೆ ಹಾಗೂ ಗುಳ್ಳೆಗಳನ್ನು ಗಮನಿಸಬೇಕಾಗುತ್ತದೆ. ಕೆಲವೊಂದು ಬಾರಿ ಚರ್ಮದ ಮೇಲೆ ಗುಳ್ಳೆಗಳು ಕಂಡುಬರುತ್ತವೆ, ಆದರೆ ಅವುಗಳು ಬೇಗ ವಾಸಿಯಾಗುವುದಿಲ್ಲ. ಗುಳ್ಳೆಗಳು ಒಡೆದುಕೊಳ್ಳುವುದು, ಚರ್ಮದ ಮೇಲೆ ರಕ್ತಸ್ರಾವ ಉಂಟಾಗುವುದು, ಇದ್ದಕ್ಕಿದ್ದಂತೆ ಗುಳ್ಳೆಗಳ ಭಾಗದಲ್ಲಿ ಊದಿಕೊಳ್ಳುವುದು ಇವೆಲ್ಲವೂ ಸಹ ಕಾರ್ಸಿನೋಮ ಲಕ್ಷಣಗಳಾಗಿ ತೋರಿಸುತ್ತವೆ. ಸ್ಕಿನ್ ಕ್ಯಾನ್ಸರ್ ಫೌಂಡೇಶನ್ ಪ್ರಕಾರ, ಈ ರೀತಿಯ ಗುಳ್ಳೆಗಳು ಕೆಲವು ವಾರಗಳು ಕಳೆದರೂ ಸಹ ವಾಸಿಯಾಗದೆ ಹಾಗೆ ಉಳಿಯುತ್ತವೆ.
ಕೇವಿನ್ ಅವರ ಪೋಸ್ಟ್ಗೆ ಸಹಸ್ರಾರು ಅಭಿಮಾನಿಗಳು ಪ್ರತಿಕ್ರಿಯೆ ಮಾಡಿದ್ದಾರೆ. ಆರೋಗ್ಯದ ಬಗ್ಗೆ ಜಾಗೃತೆ ಎಂದು ಹೇಳಿದ್ದಾರೆ. ಜೊತೆಗೆ ಚರ್ಮದ ಕ್ಯಾನ್ಸರ್ ಕುರಿತು ಅರಿವು ಮೂಡಿಸಿದ್ದಕ್ಕೆ ಧನ್ಯವಾದ ಹೇಳಿದ್ದಾರೆ.