ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್ ನಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲೂ ರಶ್ಮಿಕಾ ಹಾಗೂ ರಣಬೀರ್ ನಟನೆಯ ಅನಿಮಲ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಆದರೆ ಒಂದು ವರ್ಗದ ಜನರು ‘ಅನಿಮಲ್’ ಸಿನಿಮಾವನ್ನು ಕಟುವಾಗಿ ಟೀಕಿಸಿದ್ದಾರೆ. ರಣಬೀರ್ ಕಪೂರ್ಮಾಡಿದ ರಣ್ವಿಜಯ್ ಸಿಂಗ್ ಎಂಬ ಪಾತ್ರಕ್ಕೆ ಸಾಕಷ್ಟು ಟೀಕೆ ವ್ಯಕ್ತವಾಯಿತು. ಈ ವಿಚಾರವಾಗಿ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
‘ಅನಿಮಲ್’ ಸಿನಿಮಾದ ಕಥೆಯಲ್ಲಿ ರಣ್ವಿಜಯ್ ಸಿಂಗ್ ಹಾಗೂ ಗೀತಾಂಜಲಿ ಪ್ರೀತಿಸಿ ಮದುವೆ ಆಗಿರುತ್ತಾರೆ. ಎಂದಿಗೂ ನಿನಗೆ ಮೋಸ ಮಾಡಲ್ಲ ಅಂತ ರಣ್ ವಿಜಯ್ ಸಿಂಗ್ ಪ್ರಮಾಣ ಮಾಡಿರುತ್ತಾನೆ. ಹಾಗಿದ್ದರೂ ಕೂಡ ಆತ ಪರಸ್ತ್ರೀ ಸಹವಾಸ ಮಾಡಿ, ಗೀತಾಂಜಲಿಗೆ ಮೋಸ ಮಾಡುತ್ತಾನೆ. ಆ ವಿಡಿಯೋ ತುಣುಕನ್ನು ಅಭಿಮಾನಿಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
‘ಒಬ್ಬ ಗಂಡಸನ್ನು ನಂಬುವುದಕ್ಕಿಂತ ಭಯಾನಕವಾದ ವಿಷಯ ಬೇರೇನೂ ಇಲ್ಲ’ ಎಂದು ಈ ವಿಡಿಯೋಗೆ ಅಭಿಮಾನಿಯೊಬ್ಬರು ಕ್ಯಾಪ್ಷನ್ ನೀಡಿದ್ದಾರೆ. ಅದು ರಶ್ಮಿಕಾ ಮಂದಣ್ಣ ಅವರ ಗಮನಕ್ಕೆ ಬಂದಿದೆ. ಆ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ರಶ್ಮಿಕಾ ಅವರು, ‘ತಿದ್ದುಪಡಿ: ಮೂರ್ಖನಾದ ಗಂಡಸನ್ನು ನಂಬುವುದು ಭಯಾನಕ. ತುಂಬ ಒಳ್ಳೆಯ ಗಂಡಸರು ಇದ್ದಾರೆ. ಅಂಥವರನ್ನು ನಂಬುವುದು ವಿಶೇಷ’ ಎಂದು ಕಮೆಂಟ್ ಮಾಡಿದ್ದಾರೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದಲ್ಲಿ ಮೂಡಿಬಂದ ‘ಅನಿಮಲ್’ ಸಿನಿಮಾದಲ್ಲಿ ಅನೇಕ ದೃಶ್ಯಗಳು ಸ್ತ್ರೀ ವಿರೋಧಿ ಆಗಿವೆ ಎಂದು ಹಲವರು ತಕರಾರು ತೆಗೆದಿದ್ದರು. ಹಲವು ವಿಮರ್ಶಕರು ಕೂಡ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅನಿಮಲ್ ಚಿತ್ರದಲ್ಲಿ ಕ್ರೌರ್ಯ ಅತಿಯಾಗಿದೆ ಎಂಬ ಟೀಕೆ ಕೂಡ ಕೇಳಿಬಂತು. ಹಾಗಿದ್ದರೂ ಕೂಡ ಸಿನಿಮಾ ಯಶಸ್ಸು ಕಂಡಿತು. ಇದು ರಶ್ಮಿಕಾಗೆ ಬಾಲಿವುಡ್ ನಲ್ಲಿ ಭದ್ರವಾಗಿ ನೆಲೆಯೂರಲು ಸಹಕಾರಿಯಾಯಿತು.