ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟ ದರ್ಶನ್ ಮುಂದಿನ ಸಿನಿ ಜರ್ನಿ ಏನು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ದರ್ಶನ್ ಅವರನ್ನು ಸಿನಿಮಾ ರಂಗದಿಂದ ಬ್ಯಾನ್ ಮಾಡಬೇಕು ಎಂಬ ಕೂಗು ಕೇಳಿ ಬರ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್ ಎಂ ಸುರೇಶ್ ದರ್ಶನ್ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡುವುದು ಹಾಗೂ ಅಸಹಕಾರ ನೀಡುವುದರ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ. ಆರೋಪ ಸಾಬೀತಾದರೆ ಅಸಹಕಾರ ನೀಡುವ ವಿಚಾರಾಗಿ ನಿರ್ಧಾರ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಫಿಲ್ಮ್ ಚೇಂಬರ್ನಲ್ಲಿ ಪದಾಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದ್ದಾರೆ. ಈ ಪ್ರಕರಣವನ್ನು ನಾವು ಖಂಡಿಸುತ್ತೇವೆ. ಅವರನ್ನು ತಕ್ಷಣಕ್ಕೆ ಬ್ಯಾನ್ ಮಾಡಲು ಆಗುವುದಿಲ್ಲ. ಬ್ಯಾನ್ ಮಾಡಲು, ಕಲಾವಿದರ ಸಂಘ ಹಾಗೂ ಇತರ ಅಂಗ ಸಂಸ್ಥೆಗಳು ಭಾಗಿಯಾಗಬೇಕು ಎಂದರು.
ಈ ಪ್ರಕರಣದ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ಕೊಲೆ ಪ್ರಕರಣ ಇದ್ದಾಗ ನಾವು ಎಂಟ್ರಿ ಆಗಲು ಆಗುವುದಿಲ್ಲ. 2011 ರಲ್ಲಿ ಸರಿದೂಗಿಸಿದ್ದೆವು. ಅದು ಕುಟುಂಬದ ವಿಚಾರವಾಗಿತ್ತು. ಈಗ ನಾವು ಎಂಟ್ರಿಯಾಗಲು ಸಾಧ್ಯವಿಲ್ಲ. ಕಾನೂನಿನ ತೀರ್ಪು ಬಂದಾಗ ಕೂಡಲೇ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ದರ್ಶನ್ ಅವರ ಒಂದು ಸಿನಿಮಾ ಅರ್ಧಕ್ಕೆ ನಿಂತಿದೆ. ಐದಾರು ತಿಂಗಳು ದರ್ಶನ್ ಪ್ರಕರಣದಿಂದ ಹೊರ ಬರಲು ಸಾಧ್ಯವಿಲ್ಲ. ಮುಂದೆ ಸಿನಿಮಾಗಳೂ ಘೋಷಣೆ ಆಗಿದೆ. ಕೆಲವರು ಅಡ್ವಾನ್ಸ್ ಕೊಟ್ಟಿದ್ದಾರೆ. ಹೀಗಾಗಿ ಬ್ಯಾನ್ ಅಷ್ಟು ಸುಲಭವಲ್ಲ. ನಾವು ರಕ್ಷಿಸುವ ಕೆಲಸ ಮಾಡುತ್ತಿಲ್ಲ. ಆದ್ರೆ ಪ್ರಕರಣ ತನಿಖೆ ಹಂತದಲ್ಲಿದೆ ಎಂದು ಹೇಳಿದರು.