ಕುವೈತ್ನ ವಸತಿ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 49 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ಹಲವರು ಭಾರತೀಯರು ಸೇರಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಕುವೈತ್ನ ದಕ್ಷಿಣದಲ್ಲಿರುವ ಅಹ್ಮದಿ ಆಡಳಿತ ಪ್ರಾಂತ್ಯದ ಮಂಗಾಫ್ ಪ್ರದೇಶದ ಆರು ಮಹಡಿಗಳ ಕಟ್ಟಡವೊಂದರ ಅಡುಗೆ ಮನೆಯಲ್ಲಿ ಬುಧವಾರ ಬೆಳಿಗ್ಗೆ ಹೊತ್ತಿಕೊಂಡ ಬೆಂಕಿಯು ಈ ದುರಂತಕ್ಕೆ ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಗ್ನಿ ದುರಂತ ಸಂಭವಿಸಿದ ಕಟ್ಟಡದಲ್ಲಿ ಒಂದೇ ಕಂಪನಿಯ 160 ಮಂದಿ ಕೆಲಸಗಾರರು ವಾಸಿಸುತ್ತಿದ್ದರು ಎನ್ನಲಾಗಿದೆ.
ಮೃತರಲ್ಲಿ ಹೆಚ್ಚಿನವರು ಭಾರತೀಯರಾಗಿದ್ದು, ಅವರೆಲ್ಲ 20ರಿಂದ 50 ವರ್ಷ ವಯಸ್ಸಿನ ನಡುವಿನವರು ಎಂದು ವಿಧಿವಿಜ್ಞಾನ ಇಲಾಖೆಯ ಮಹಾನಿರ್ದೇಶಕ ಮೇಜರ್ ಜನರಲ್ ಇದ್ ಅಲ್-ಒವೈಹಾನ್ ಅವರು ಹೇಳಿರುವುದಾಗಿ ಅರಬ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ನಿವಾಸಿಗಳು ನಿದ್ರಿಸುತ್ತಿದ್ದಾಗ ಬೆಂಕಿ ಹೊತ್ತಿಕೊಂಡಿದೆ. ಹೆಚ್ಚಿನವರು ದಟ್ಟವಾಗಿ ಆವರಿಸಿದ ಹೊಗೆಯ ಪರಿಣಾಮವಾಗಿ ಮೃತಪಟ್ಟಿದ್ದಾರೆ, ಕಟ್ಟಡದಲ್ಲಿ ಇದ್ದ ಹಲವರನ್ನು ರಕ್ಷಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ಕುವೈತ್ನಲ್ಲಿ ಇರುವ ಭಾರತೀಯ ರಾಯಭಾರ ಕಚೇರಿಯು ಸಹಾಯವಾಣಿ ಆರಂಭಿಸಿದೆ (ಸಂಖ್ಯೆ: +965-65505246). ಸಂಬಂಧಪಟ್ಟವರು ಈ ಸಂಖ್ಯೆಗೆ ಕರೆಮಾಡುವಂತೆ ಕಚೇರಿಯು ಹೇಳಿದೆ.
‘ಕುವೈತ್ ನಗರದಲ್ಲಿನ ಅಗ್ನಿ ಅವಘಡದ ಸುದ್ದಿ ತಿಳಿದು ಆಘಾತವಾಗಿದೆ. ನಮ್ಮ ರಾಯಭಾರಿ ಅಲ್ಲಿಗೆ ತೆರಳಿದ್ದಾರೆ. ಇನ್ನಷ್ಟು ಮಾಹಿತಿಗೆ ಕಾಯುತ್ತಿದ್ದೇವೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಎಕ್ಸ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ‘ಸಂಬಂಧಪಟ್ಟ ಎಲ್ಲರಿಗೂ ನಮ್ಮ ರಾಯಭಾರ ಕಚೇರಿಯು ಪೂರ್ಣ ನೆರವು ಒದಗಿಸಲಿದೆ’ ಎಂದು ಅವರು ಹೇಳಿದ್ದಾರೆ.
‘ತುರ್ತು ವೈದ್ಯಕೀಯ ಸೇವೆಗಳಿಗೆ, ಇತರ ಅಗತ್ಯ ಕ್ರಮಗಳಿಗಾಗಿ ರಾಯಭಾರ ಕಚೇರಿಯು ಸಂಬಂಧಪಟ್ಟ ಎಲ್ಲ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದೆ’ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ಭೇಟಿ ಮಾಡಿದ ರಾಯಭಾರಿಯು ಎಲ್ಲ ರೀತಿಯ ನೆರವು ನೀಡುವ ಭರವಸೆ ನೀಡಿದ್ದಾರೆ ಎಂದು ಕಚೇರಿ ತಿಳಿಸಿದೆ.
ಕುವೈತ್ನ ಆಂತರಿಕ ವ್ಯವಹಾರಗಳು ಹಾಗೂ ರಕ್ಷಣಾ ಖಾತೆಯ ಹೊಣೆಹೊತ್ತಿರುವ ಪ್ರಥಮ ಉಪ ಪ್ರಧಾನಿ ಶೇಖ್ ಫಹಾದ್ ಅಲ್-ಯೂಸುಫ್ ಅಲ್-ಸಬಾ ಅವರು ಬೆಂಕಿ ಅನಾಹುತ ಸಂಭವಿಸಿದ ಕಟ್ಟಡದ ಮಾಲೀಕರನ್ನು ಬಂಧಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ