ಕುವೈತ್ ನ ವಸತಿ ಅಪಾರ್ಟ್ಮೆಂಟ್ ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 45 ಭಾರತೀಯರು ಸೇರಿದಂತೆ ಒಟ್ಟು 49 ಜನ ಸಜೀವ ದಹನವಾಗಿದ್ದಾರೆ. ಇದೀಗ ಖ್ಯಾತ ಎನ್ಆರ್ಐ ಉದ್ಯಮಿ ಮತ್ತು ಯುಎಇ ಮೂಲದ ಲುಲು ಗ್ರೂಪ್ ಅಧ್ಯಕ್ಷ ಎಂಎ ಯೂಸುಫ್ ಅಲಿ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಕುವೈತ್ ನ ದಕ್ಷಿಣ ನಗರವಾದ ಮಂಗಾಫ್ನಲ್ಲಿ 196 ವಲಸೆ ಕಾರ್ಮಿಕರು ತಂಗಿದ್ದ ಏಳು ಅಂತಸ್ತಿನ ಕಟ್ಟಡದಲ್ಲಿ ಬುಧವಾರ ಭಾರಿ ಅಗ್ನಿ ಅವಘಡ ಸಂಭವಿಸಿತ್ತು. ಘಟನೆಯಲ್ಲಿ ಕನಿಷ್ಠ 49 ವಿದೇಶಿ ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು 50 ಮಂದಿ ಗಾಯಗೊಂಡಿದ್ದಾರೆ.
ಪರಿಹಾರ ನಿಧಿಯ ಭಾಗವಾಗಿ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ನೀಡಲಾಗುವುದು ಎಂದು ಅಬುಧಾಬಿಯಲ್ಲಿ ಲುಲು ಗ್ರೂಪ್ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ. ಕೇಂದ್ರ ಸರ್ಕಾರ ಮತ್ತು ಕೇರಳ ಸರ್ಕಾರ ಕೂಡ ಮೃತರ ಕುಟುಂಬಕ್ಕೆ ಇದೇ ರೀತಿಯ ಪರಿಹಾರ ಘೋಷಿಸಿವೆ.