ಕೆಲವರಿಗೆ ಹಗಲಿಡೀ ಸುಳಿವಿಲ್ಲದ ಕಾಲು ಸೆಳೆತ ರಾತ್ರಿಯಾಗುತ್ತಿದ್ದಂತೆ ಹಾಜರಾಗುತ್ತದೆ. ಯಾಕಾದರೂ ಹೀಗಾಗುತ್ತದೋ ಎಂದು ಗೊಣಗುತ್ತಾ ನರಳುವ ಬದಲು, ಈ ಅವಸ್ಥೆಯನ್ನು ಹತೋಟಿಗೆ ತರಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು.
ಕಾಲು ನೋವುಗಳಲ್ಲಿ ಹಲವಾರು ರೀತಿಯಿದೆ. ಇದೆಂಥ ನೋವು ಎಂದು ಕೇಳಿದರೆ, ರಾತ್ರಿ ಅಡ್ಡಾಗುತ್ತಿದ್ದಂತೆ ಮೀನಖಂಡಗಳಲ್ಲಿ ಸೆಳೆತ ಪ್ರಾರಂಭವಾಗುತ್ತದೆ. ಇದ್ದಕ್ಕಿದ್ದಂತೆ ಸ್ನಾಯುಗಳೆಲ್ಲ ಹಿಡಿದು ತಿರುಚಿದಂಥ ಅನುಭವ ತೀವ್ರ ವೇದನೆಯನ್ನು ನೀಡುತ್ತದೆ. ಕಾಲುಗಳಲ್ಲಿ ಒಂದೆಡೆ ಇಟ್ಟುಕೊಳ್ಳಲೂ ಕಷ್ಟ, ಹಾಗಂತ ಅಲ್ಲಾಡಿಸುವುದಕ್ಕೂ ಆಗದ ಸ್ಥಿತಿ. ಈ ಕಾಲು ಅಥವಾ ಮೀನಖಂಡದ ಸೆಳೆತ ಬಹಳಷ್ಟು ಜನರನ್ನು ಕಾಡಿಸುತ್ತದೆ
ಇದಕ್ಕೆ ಕಾರಣಗಳು ಹಲವು. ದೀರ್ಘ ಕಾಲ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವುದು, ವ್ಯಾಯಾಮವಿಲ್ಲದ ಜಡತೆ, ನೀರು ಸಾಕಷ್ಟು ಕುಡಿಯದಿರುವುದು, ಕೆಲವು ಸ್ನಾಯುಗಳನ್ನು
ಅತಿಯಾಗಿ ಬಳಸಿದ್ದರಿಂದ ಕಾಡುವ ದುರ್ಬಲತೆ ಅಥವಾ ಮಧುಮೇಹದಂಥ ಯಾವುದೋ ಆರೋಗ್ಯ ಸಮಸ್ಯೆ ಇದಕ್ಕೆ ಕಾರಣವಾಗಬಹುದು. ಸಾಮಾನ್ಯವಾಗಿ ಇಂಥ ಕಾಲು ಸೆಳೆತದಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗದಿದ್ದರೂ, ದಿನಾ ರಾತ್ರಿ ಇದೇ ಕತೆಯಾದರೆ ನಿದ್ದೆಗೆಟ್ಟೇ ಆರೋಗ್ಯ ಹಾಳಾದೀತು. ಹಾಗಾದರೆ ಏನು ಮಾಡಬೇಕು?
ಮಲಗುವ ಸ್ವಲ್ಪ ಹೊತ್ತಿಗೆ ಮೊದಲು ಕೆಲವು ಸರಳವಾದ ವ್ಯಾಯಾಮಗಳನ್ನು ಮಾಡುವುದರಿಂದ ಕಾಲಿನ ಈ ಭಾಗಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸಬಹುದು
ಮೀನಖಂಡಗಳ ಸ್ನಾಯುಗಳನ್ನು ಎಳೆದು ಹಿಗ್ಗಿಸಿದಂತೆ ಸ್ಟ್ರೆಚ್ ಮಾಡುವುದು ನೆರವಾಗುತ್ತದೆ. ಇದಕ್ಕಾಗಿ ಗೋಡೆ ಮತ್ತು ನೆಲದ ನಡುವೆ ಪಾದವನ್ನು ಜಾರುಬಂಡೆಯಂತೆ ತಾಗಿಸಿ ನಿಲ್ಲಿಸಿ. ಇನ್ನೊಂದು ಕಾಲನ್ನು ಒಂದಡಿ ಹಿಂದಿಟ್ಟು, ಜಾರುಬಂಡೆಯಂತೆ ನಿಲ್ಲಿದ
ಸಾಮಾನ್ಯ ನಡಿಗೆಯೂ ಕಾಲಿಗೆ ರಕ್ತ ಸಂಚಾರ ಹೆಚ್ಚಿಸುತ್ತದೆ. ಆದರೆ ಇದು ಒಮ್ಮೆ ಕಾಲಿನ ಬೆರಳುಗಳ ಮೇಲೆ ಮತ್ತೊಮ್ಮೆ ಹಿಮ್ಮಡಿಯ ಮೇಲೆ ನಡೆಯುವಂಥ ಕ್ರಮ. ಹೀಗೆ ಹಿಮ್ಮಡಿಯ ಮೇಲೊಂದು ಸುತ್ತು ಮತ್ತು ಕಾಲ್ಬೆರಳುಗಳ ಮೇಲೊಂದು ಸುತ್ತು ಹಾಕುತ್ತಾ ಮನೆಯಲ್ಲೇ ನಾಲ್ಕಾರು ಬಾರಿ ನಡೆಯಿರಿ. ಇದರಿಂದ ಕಾಲುಗಳ ಸ್ನಾಯುಗಳು ಬಲಗೊಳ್ಳುತ್ತವೆ
ಪಾದದ ಕೀಲನ್ನು ವೃತ್ತಾಕಾರದಲ್ಲಿ ನಿಧಾನಕ್ಕೆ ತಿರುಗಿಸಿ. ನಾಲ್ಕು ಬಾರಿ ಪ್ರದಕ್ಷಿಣೆಯಂತೆ ಮತ್ತೆ ನಾಲ್ಕು ಬಾರಿ ಅಪ್ರದಕ್ಷಿಣೆಯಂತೆ ತಿರುಗಿಸಿ. ಇದರಿಂದ ಕೀಲುಗಳ ಆರೋಗ್ಯ ವೃದ್ಧಿಸಿ, ಕಾಲುಗಳಿಗೆ ರಕ್ತ ಸಂಚಾರ ಹೆಚ್ಚುತ್ತದೆ. ಈ ವ್ಯಾಯಾಮವನ್ನು ಕೂತಲ್ಲೇ ಮಾಡಬಹುದು
ಆಹಾರದಲ್ಲಿ ಬದಲಾವಣೆದೇಹಕ್ಕೆ ನೀರು ಸಾಕಾಗದೆ ಇರುವುದು ಸ್ನಾಯುಗಳಲ್ಲಿ ಸೆಳೆತ ಬರುವುದಕ್ಕೆ ಪ್ರಮುಖ ಕಾರಣ. ಹಾಗಾಗಿ ದಿನಕ್ಕೆ ಮೂರು ಲೀ. ನೀರಿನ ಪ್ರಮಾಣ ತಪ್ಪಿಸಬೇಡಿ. ಅತಿಯಾಗಿ ಕೆಫೇನ್ ಮತ್ತು ಆಲ್ಕೋಹಾಲ್ ದೂರ ಮಾಡಿ. ಇದು ಸಮಸ್ಯೆಯನ್ನು ಬಿಗಡಾಯಿಸುತ್ತವೆ. ಬರೀ ನೀರು ಕುಡಿಯುವುದು ಕಷ್ಟ ಎನಿಸಿದರೆ, ಜೊತೆಗೆ ಎಲೆಕ್ಟ್ರೋಲೈಟ್ಗಳನ್ನು ಸೇರಿಸಿಕೊಳ್ಳಿ. ಇದರಿಂದ ಸ್ನಾಯುಗಳ ಕ್ಷಮತೆ ಹೆಚ್ಚುತ್ತದೆ. ಜೊತೆಗೆ ಬಾಳೆಹಣ್ಣು, ಪಾಲಕ್ ಸೊಪ್ಪು, ಕಾಯಿ-ಬೀಜಗಳು, ಡೇರಿ ಉತ್ಪನ್ನಗಳೆಲ್ಲ ಆಹಾರದಲ್ಲಿ ಇರಲಿ