ವಾಷಿಂಗ್ಟನ್: ಬಾಲಿವುಡ್ನ ಪಿಕೆ ಸಿನಿಮಾದಲ್ಲಿರುವಂತೆ ವ್ಯಕ್ತಿಯೋರ್ವ ತಾನು ಅನ್ಯಗ್ರಹದಿಂದ ಬಂದಿದ್ದೇನೆ ಎಂದು ಅಮೆರಿಕದ ಬೀದಿಯಲ್ಲಿ ಬೆತ್ತಲಾಗಿ ಓಡಾಡುತ್ತಿದ್ದು ಸದ್ಯ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಫ್ಲೋರಿಡಾದ ಪಾಮ್ ಬೀಚ್ನಲ್ಲಿ 44 ವರ್ಷದ ವ್ಯಕ್ತಿಯೊಬ್ಬ ಬೆತ್ತಲಾಗಿ ನಡೆದುಕೊಂಡು ಹೋಗುತ್ತಿದ್ದುದನ್ನು ಸ್ಥಳೀಯರು ಗಮನಿಸಿದ್ದಾರೆ. ವಿಷಯ ತಿಳಿದ ಪೊಲೀಸರು ಆತನನ್ನು ಬಂಧಿಸಿದ್ದು, ಬಳಿಕ ಆತ ತಾನು ಬೇರೊಂದು ಗ್ರಹದಿಂದ ಬಂದಿದ್ದೇನೆ ಎಂದಿದ್ದಾನೆ.
ಪೊಲೀಸರು ಬಂಧಿಸಿದಾಗ ಆತ ನಾನು ಬಟ್ಟೆಗಳನ್ನು ಎಲ್ಲಿ ಇಟ್ಟಿದ್ದೇನೋ ಗೊತ್ತಿಲ್ಲ ಎಂದಿದ್ದಾನೆ. ಆತ ತನ್ನ ಹೆಸರು ಅಥವಾ ಯಾವುದೇ ಗುರುತುಗಳನ್ನು ನೀಡಲು ನಿರಾಕರಿಸಿದ್ದಾನೆ. ಇದಾದ ಬಳಿಕ ಪೊಲೀಸರು ಆತನ ಬಗ್ಗೆ ಪತ್ತೆ ಹಚ್ಚಿ, ಹೆಸರನ್ನು ಜೇಸನ್ ಸ್ಮಿತ್ ಎಂದು ಗುರುತಿಸಿದ್ದಾರೆ.
ವ್ಯಕ್ತಿ ನಾನು ಭೂಮಿಯವನೇ ಅಲ್ಲ, ಅನ್ಯಗ್ರಹದಿಂದ ಬಂದಿದ್ದೇನೆ. ಕೆಲ ದಿನಗಳಿಂದ ಪಾಮ್ ಬೀಚ್ನಲ್ಲಿ ವಾಸಿಸುತ್ತಿದ್ದೇನೆ ಎಂದು ಹೇಳಿದ್ದಾನೆ. ಇದೀಗ ಪೊಲೀಸರು ಅಸಭ್ಯವಾಗಿ ವರ್ತಿಸಿರುವುದಕ್ಕೆ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.