ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗಿದ್ದು ವಿಚಾರಣೆ ಎದುರಿಸುತ್ತಿದ್ದಾರೆ. ಪ್ರಕರಣದಲ್ಲಿ ಎ2 ಆರೋಪಿಯಾಗಿರೋ ದರ್ಶನ್ ನಡೆಸಿದ ಕೃತ್ಯವನ್ನು ಸಾಕಷ್ಟು ಮಂದಿ ಖಂಡಿಸಿದ್ದಾರೆ. ಆದರೆ ಘಟನೆ ನಡೆದು 10 ದಿನ ಕಳೆದಿದ್ದರು ದರ್ಶನ್ ಪತ್ನಿ ವಿಜಯಲಕ್ಷ್ಮಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಮೊದಲ ಬಾರಿಗೆ ವಿಜಯಲಕ್ಷ್ಮಿ ಮೌನ ಮುರಿದಿದ್ದಾರೆ.
ಹತ್ಯೆ ಆಗಿರುವ ಚಿತ್ರದುರ್ಗದ ರೇಣುಕಾ ಸ್ವಾಮಿ ಕುಟುಂಬಕ್ಕೆ ವಿಜಯಲಕ್ಷ್ಮಿ ಸಂತಾಪ ಸೂಚಿಸಿದ್ದಾರೆ. ಜೊತೆಗೆ ಸತ್ಯ ಯಾವತ್ತಿದ್ದರು ಗೆದ್ದೆ ಗೆಲ್ಲುತ್ತದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
‘ಎಲ್ಲಕ್ಕಿಂತ ಮೊದಲು, ಮೃತ ಶ್ರೀ ರೇಣುಕಾ ಸ್ವಾಮಿ ಕುಟುಂಬದವರಿಗೆ ನನ್ನ ಸಂತಾಪಗಳು’ ಎಂದು ವಿಜಯಲಕ್ಷ್ಮಿ ಅವರು ಬರೆದುಕೊಂಡಿದ್ದಾರೆ. ಅಲ್ಲದೇ, ಕೆಲವು ಪ್ರಮುಖ ವಿಚಾರಗಳನ್ನು ಅವರು ತಿಳಿಸಿದ್ದಾರೆ. ದರ್ಶನ್ ಹಾಗೂ ಅವರ ಕುಟುಂಬದವರಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಸುಳ್ಳು ಸುದ್ದಿ ಹರಡದಂತೆ ಅವರು ಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದಾರೆ. ಆ ಬಗ್ಗೆಯೂ ವಿಜಯಲಕ್ಷ್ಮಿ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
‘ಅಧಿಕಾರಿಗಳು ನೀಡುವ ಅಧಿಕೃತ ಮಾಹಿತಿಯನ್ನು ಮಾತ್ರ ಪ್ರಸಾರ ಮಾಡಬೇಕು ಎಂದು ನಾನು ಎಲ್ಲರನ್ನೂ ಒತ್ತಾಯಿಸುತ್ತೇನೆ. ಚಾಮುಂಡೇಶ್ವರಿ ತಾಯಿ ಬಗ್ಗೆ ಮತ್ತು ನಮ್ಮ ಕಾನೂನಿನ ಬಗ್ಗೆ ನನಗೆ ಸಂಪೂರ್ಣ ನಂಬಿಕೆ ಇದೆ. ನ್ಯಾಯಕ್ಕೆ ಜಯ ಸಿಗಲಿ. ಸತ್ಯಮೇವ ಜಯತೆ’ ಎಂದು ವಿಜಯಲಕ್ಷ್ಮಿ ಅವರು ಪೋಸ್ಟ್ ಮಾಡಿದ್ದಾರೆ. ಇದರ ಜೊತೆಗೆ ನ್ಯಾಯಾಲಯದ ಆದೇಶಪ್ರತಿಯನ್ನು ಅವರು ಶೇರ್ ಮಾಡಿಕೊಂಡಿದ್ದಾರೆ.