ಚಿತ್ರದುರ್ಗದ ರೇಣುಕಾಸ್ವಾಮಿ ಕಿಡ್ನಾಪ್ ಹಾಗೂ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಪವಿತ್ರಾ ಗೌಡ ಜೈಲು ಸೇರಿದ್ದಾರೆ. ಸಾಕಷ್ಟು ದಿನಗಳ ವಿಚಾರಣೆ ಬಳಿಕ ಪವಿತ್ರಾ ಕೃತ್ಯದಲ್ಲಿ ಭಾಗಿಯಾಗಿರುವುದು ಕನ್ಪಾರ್ಮ್ ಆದ ಹಿನ್ನೆಲೆಯಲ್ಲಿ ಆಕೆಯನ್ನು ಜೈಲಿಗೆ ಕಳುಹಿಸಲಾಗಿದೆ. ಈ ವೇಳೆ ಜೈಲು ಪಾಲಾದ ಅಮ್ಮನನ್ನು ಕಂಡು ಪವಿತ್ರಾ ಗೌಡ ಮಗಳು ಖುಷಿ ಕಣ್ಣೀರು ಹಾಕಿದ್ದಾಳೆ.
ವಿಚಾರಣೆ ನಡೆಸಿದ ನ್ಯಾಯಾಲಯವು ಪವಿತ್ರಾ ಗೌಡ ಸೇರಿ ಹಲವು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಿದೆ. ಕೋರ್ಟ್ನಲ್ಲಿ ವಿಚಾರಣೆ ಮುಗಿಸಿ ಪೊಲೀಸ್ ವ್ಯಾನ್ ಹತ್ತಿದಾಗ ಅವರನ್ನು ನೋಡಲು ಪುತ್ರಿ ಖುಷಿ ಗೌಡ ಆಗಮಿಸಿದ್ದರು. ನೂಕುನುಗ್ಗಲಿನ ನಡುವೆ ತಾಯಿ ಜೊತೆ ಮಾತನಾಡಲು ಖುಷಿ ಗೌಡ ಹರಸಾಹಸ ಪಡಬೇಕಾಯಿತು. ಪವಿತ್ರಾ ಗೌಡ ಅವರ ಕುಟುಂಬದ ಇತರೆ ಸದಸ್ಯರು ಕೂಡ ಪೊಲೀಸ್ ವ್ಯಾನ್ನ ಪಕ್ಕದಲ್ಲಿ ನಿಂತು ಮಾತನಾಡಿದರು.
ಕೋರ್ಟ್ ಹೊರಗಡೆ ಪವಿತ್ರಾ ಗೌಡ ತಾಯಿ ಹಾಗೂ ಮಗಳು ಕಾಯುತ್ತಾ ನಿಂತಿದ್ದರು. ಪವಿತ್ರಾ ಗೌಡ ಕೋರ್ಟ್ನಿಂದ ಹೊರ ಬಂದು ಪೊಲೀಸ್ ವ್ಯಾನ್ ಹತ್ತುತ್ತಿದ್ದಂತೆಯೇ ಇಬ್ಬರು ಕೂಡ ಪವಿತ್ರಾ ಗೌಡ ಅವರನ್ನು ಕಂಡು ಕಣ್ಣೀರು ಹಾಕಿದ್ದಾರೆ. ಇನ್ನು ಪವಿತ್ರಾ ಗೌಡ ಕೂಡ ಇಬ್ಬರನ್ನು ನೋಡಿ ಗದ್ಗದಿತರಾಗಿದ್ದು ಬಳಿಕ ಅಮ್ಮ ಹಾಗೂ ಮಗಳನ್ನು ಸಮಾಧಾನ ಪಡಿಸಿದ್ದಾರೆ.
ಕಣ್ಣೀರು ಹಾಕುತ್ತಾ ಇದ್ದ ಮಗಳಿಗೆ, ಏನೂ ಆಗಲ್ಲ.. ಸುಮ್ಮನೇ ಇರು ಸುಮ್ಮನೆ ಇರು ಎಂದು ಪವಿತ್ರಾ ಗೌಡ ಸಮಾಧಾನ ಮಾಡಿದ್ದಾರೆ. ಆದರೆ ಹೆಚ್ಚಿನ ಮಾತುಕತೆಗೆ ಪೊಲೀಸರು ಅವಕಾಶ ಮಾಡಿಕೊಡಲಿಲ್ಲ. ಕೂಡಲೇ ವ್ಯಾನ್ ಹೊರಟಿದ್ದು, ಅಳುತ್ತಲೇ ತಲೆ ತಗ್ಗಿಸಿಕೊಂಡು ಪವಿತ್ರಾ ಪರಪ್ಪನ ಅಗ್ರಹಾರ ಜೈಲಿನತ್ತ ತೆರಳಿದರು.