ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿ 17 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ನಿನ್ನೆ ದರ್ಶನ್ ಹಾಗೂ ನಾಲ್ವರನ್ನು ಮತ್ತಷ್ಟು ವಿಚಾರಣೆ ನಡೆಸಬೇಕಿರುವುದರಿಂದ ಪೊಲೀಸರು ಮತ್ತೆ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಕೊಲೆ ಪ್ರಕರಣವನ್ನ ಸರ್ಕಾರ ಅದೆಷ್ಟು ಗಂಭೀರವಾಗಿ ಪರಿಗಣಿಸಿದೆ ಎಂಬುದಕ್ಕೆ, ಗುರುವಾರ ಖುದ್ದು ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟ ಸಭೆಯಲ್ಲಿ ಆಡಿರುವ ಮಾತೇ ಸಾಕ್ಷಿಯಾಗಿದೆ.
ರೇಣುಕಾಸ್ವಾಮಿ ಮೈ ಮೇಲೆ ಆಗಿರೋ ಗಾಯಗಳು, ಅದೆಂಥಾ ಚಿತ್ರಹಿಂಸೆ ಕೊಟ್ಟಿದ್ದಾರೆ ಎಂಬುದಕ್ಕೆ ಸಾಕ್ಷಿ ಹೇಳುತ್ತಿವೆ. ಕೈ ಮೇಲಿದ್ದ ಹಚ್ಚೆ ಕಿತ್ತು ಬರುವಂತೆ ಸುಟ್ಟಿದ್ದಾರೆ. ಎದೆ ಮೇಲೆ, ಕಾಲಿನ ಮೇಲೂ ಸುಟ್ಟ ಗಾಯಗಳಿವೆ. ಇನ್ನು ಬೆನ್ನ ತುಂಬಾ ರಕ್ತ ಹೆಪ್ಪುಗಟ್ಟುವಂತೆ, ಬಾಸುಂಡೆ ಬರುವಂತೆ ಹಲ್ಲೆ ನಡೆಸಲಾಗಿದೆ. ತಲೆಗೂ ರಕ್ತ ಬರುವಂತೆ ಹೊಡೆಯಲಾಗಿದೆ. ಇಷ್ಟೇ ಅಲ್ಲ. ಮರ್ಮಾಂಗಕ್ಕೆ ಹೊಡೆದಿರುವ ಫೋಟೋ ಕೂಡ ಇದೆ. ಆದರೆ, ಅದನ್ನು ತೋರಿಸಲಾಗದು, ಅಷ್ಟೊಂದು ಭಯಾನಕವಾಗಿದೆ ಎಂದು ಸಿಎಂಗೆ ಮಾಹಿತಿ ನೀಡಲಾಗಿದೆ.
ಅಕ್ಷರಶಃ ನರಕ ಹೇಗಿರುತ್ತದೆ ಎಂಬುದನ್ನು ರೇಣುಕಾಸ್ವಾಮಿಗೆ ಭೂಮಿಯ ಮೇಲೆಯೇ ತೋರಿಸಿದ್ದಾರೆ ಎಂಬುದಕ್ಕೆ ಸಾಕ್ಷಿಯೇ ಪೊಲೀಸ್ ಮೂಲಗಳಿಂದ ಸಿಕ್ಕಿರುವ, ಎದೆನಡುಗಿಸುವ ಈ ಚಿತ್ರಗಳು. ಈ ಕ್ರೂರತೆಗೆ ಸಿದ್ದರಾಮಯ್ಯ ಸಹ ಒಂದು ಕ್ಷಣ ಆಘಾತ ವ್ಯಕ್ತಪಡಿಸಿದ್ದಾರೆ.
ಪೊಲೀಸರಿಂದ ಈ ಬಗ್ಗೆ ಮಾಹಿತಿ ಪಡೆದಿರುವ ಸಿಎಂ ಸಿದ್ದರಾಮಯ್ಯ ಕ್ಯಾಬಿನೆಟ್ ಸಭೆಯಲ್ಲಿ ಸಚಿವರ ಮುಂದೆ ಆ ಕ್ರೂರತೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಸಂಪುಟ ಸಭೆ ಆರಂಭದಲ್ಲೇ ಮಾತನಾಡಿರುವ ಸಿಎಂ ಈ ಕೊಲೆಯಂತ ಕ್ರೂರತನವನ್ನು ನಾನೂ ನೋಡಿಯೇ ಇಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ ಸಚಿವರಿಗೂ ಈ ಬಗ್ಗೆ ಮಾತಾಡದಂತೆ ಎಚ್ಚರಿಕೆ ನೀಡಿದ್ದಾರೆ
ಇದರಂತಹ ಕ್ರೂರತನ ನಾನು ನೋಡಿಯೇ ಇಲ್ಲ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಯಾರೂ ಮಾತಾಡಬೇಡಿ. ಅನಗತ್ಯವಾಗಿ ಯಾರೂ ತುಟಿ ಬಿಚ್ಚಬೇಡಿ. ಪರ-ವಿರೋಧ ಚರ್ಚೆಯನ್ನೂ ಮಾಡಬೇಡಿ. ಕಾನೂನು, ಪೊಲೀಸರು ತಮ್ಮ ಕೆಲಸ ಮಾಡುತ್ತಾರೆ. ನೀವು ಯಾರೂ ಕೊಲೆ ಬಗ್ಗೆ ಯಾವುದೇ ಚರ್ಚೆ ಮಾಡಬೇಡಿ ಎಂದು ಖುದ್ದು ಸಿಎಂ ಹೇಳಿದ್ದಾರೆ. ಈ ಮೂಲಕ ಸರ್ಕಾರ ಯಾರ ರಕ್ಷಣೆಗೂ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.