ಹೊಸದಿಲ್ಲಿ: ಕೇನ್ ವಿಲಿಯಮ್ಸನ್ ಶತಕದ ಬಲದಿಂದ ನ್ಯೂಜಿಲೆಂಡ್ ತಂಡ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ದ ಎರಡು ವಿಕೆಟ್ಗಳ ರೋಚಕ ಗೆಲುವು ಪಡೆಯಿತು. ಆ ಮೂಲಕ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ಗೆ ಅಧಿಕೃತವಾಗಿ ಅರ್ಹತೆ ಪಡೆಯಿತು. ಆ ಮೂಲಕ ಜೂನ್ 7 ರಿಂದ 11ರವರೆಗೆ ಲಂಡನ್ ದಿ ಓವಲ್ ಮೈದಾನದಲ್ಲಿ ನಡೆಯುವ ಫೈನಲ್ ಹಣಾಹಣಿಯಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಣಸಲಿವೆ.
ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ಗೆ ಅರ್ಹತೆ ಪಡೆಯುವ ಸಲುವಾಗಿ ಭಾರತ ತಂಡ, ಆಸ್ಟ್ರೇಲಿಯಾ ವಿರುದ್ದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು 3-0 ಅಂಥವಾ 3-1 ಅಂತರದಲ್ಲಿ ಗೆಲ್ಲಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ ನಡೆಯುತ್ತಿರುವ ಅಹಮದಾಬಾದ್ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡಕ್ಕೆ ಗೆಲುವು ಅಗತ್ಯವಿತ್ತು. ಆದರೆ, ಪ್ರಸ್ತುತ ನಾಲ್ಕನೇ ಟೆಸ್ಟ್ ಪಂದ್ಯ ಡ್ರಾನತ್ತ ಮುಖ ಮಾಡಿದೆ.
ಮತ್ತೊಂದೆಡೆ ಶ್ರೀಲಂಕಾ ತಂಡ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ಗೆ ಅರ್ಹತೆ ಪಡೆಯಲು ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಳ್ಳುವ ಅಗತ್ಯವಿತ್ತು. ಆದರೆ, ಮೊದಲನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಕೇವಲ 2 ವಿಕೆಟ್ ಸೋಲು ಅನುಭವಿಸುವ ಮೂಲಕ ಸಿಂಹಳೀಯರು ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ರೇಸ್ನಿಂದ ಅಧಿಕೃತವಾಗಿ ಹೊರ ಬಿದ್ದಿದೆ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಅಹಮದಾಬಾದ್ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಫಲಿತಾಂಶ ರೋಹಿತ್ ಶರ್ಮಾ ಪಡೆಗೆ ಲೆಕ್ಕಕ್ಕಿಲ್ಲ. ಏಕೆಂದರೆ, ತಮಗೆ ಪ್ರಬಲ ಸ್ಪರ್ಧಿಯಾಗಿದ್ದ ಶ್ರೀಲಂಕಾ ತಂಡ ಆರಂಭಿಕ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಸೋತಿದೆ. ಇದರಿಂದಾಗಿ ರೋಹಿತ್ ಶರ್ಮಾ ಪಡೆಯ ಡಬ್ಲ್ಯುಟಿಸಿ ಫೈನಲ್ ಹಾದಿ ಸುಗಮವಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ತಂಡ ನಾಲ್ಕನೇ ಟೆಸ್ಟ್ನಲ್ಲಿ ಡ್ರಾ ಫಲಿತಾಂಶ ಕಂಡರೂ ಅಥವಾ ಸೋತರೂ ಯಾವುದೇ ಸಮಸ್ಯೆ ಇಲ್ಲ.