ನಾಲ್ಕನೇ ಪತ್ನಿಗಾಗಿ 3ನೇ ಪತ್ನಿಯ ಚಿನ್ನ ಕದ್ದವನಿಗೆ ಮಗನಿಂದಲೇ ಗೂಸಾ ಬಿದ್ದ ಘಟನೆ ಜರುಗಿದೆ. ಬೆಂಗಳೂರು ಉತ್ತರ ತಾಲೂಕಿನ ದೊಡ್ಡಬಿದರಕಲ್ಲು ಗ್ರಾಮದಲ್ಲಿ ಈ ವಿಚಿತ್ರ ಘಟನೆ ನಡೆದಿದೆ.
ದೊಡ್ಡಬಿದರಕಲ್ಲು ಗ್ರಾಮದ ಭಕ್ತವತ್ಸಲ ಎಂಬ ವ್ಯಕ್ತಿಗೆ ನಾಲ್ಕು ಮದುವೆಯಾಗಿದೆ. ಮೊದಲ ಪತ್ನಿ ಕವಿತ, ಎರಡನೇ ಪತ್ನಿ ಸಾವಿತ್ರಿ, ಮೂರನೇ ಪತ್ನಿ ನಾಗರತ್ನಮ್ಮ. ನಾಲ್ಕನೇ ಪತ್ನಿಯ ಹೆಸರು ಪದ್ಮಾವತಿ. ಈ ಭಕ್ತವತ್ಸಲ ತನ್ನ 3ನೇ ಪತ್ನಿ ನಾಗರತ್ನಮ್ಮ ಮನೆಯಲ್ಲಿದ್ದ 50 ಗ್ರಾಂಗೂ ಹೆಚ್ಚು ಚಿನ್ನಾಭರಣ ಕದ್ದು ನಾಲ್ಕನೇ ಪತ್ನಿ ಪದ್ಮಾವತಿಗೆ ಕೊಟ್ಟಿದ್ದಾನೆ. ಈ ವಿಚಾರ ಮೂರನೇ ಪತ್ನಿಯ ಮಗ 18 ವರ್ಷದ ಜೀವನ್ಗೆ ಗೊತ್ತಾಗಿದೆ. ಇದರಿಂದ ಸಿಟ್ಟಾದ ಜೀವನ್ ಸೀದಾ ಪದ್ಮಾವತಿ ಮನೆಗೆ ತೆರಳಿದ್ದಾನೆ. ಈ ವೇಳೆ ಅಲ್ಲೇ ಮಲಗಿದ್ದ ಭಕ್ತವತ್ಸಲ ಮೇಲೆ ದಾಳಿ ನಡೆಸಿದ್ದಾನೆ.
ನಾಲ್ಕು ಮದುವೆಯಾಗಿರುವ ಭಕ್ತವತ್ಸಲ ‘ಕೃಷ್ಣ ಭಾಗ್ಯ ಜಲ ನಿಗಮ’ದಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿದ್ದಾನೆ. ಈಗಾಗಲೇ ಮದುವೆಯಾಗಿರುವ ಯಾರೊಬ್ಬರಿಗೂ ವಿಚ್ಛೇದನ ಕೊಡದೇ ನಾಲ್ಕು ಮದುವೆಯಾಗಿದ್ದಾನೆ. ಈ ನಾಲ್ವರು ಪತ್ನಿಯರಿಂದ ಒಟ್ಟಾಗಿ ಆತನಿಗೆ 6 ಮಕ್ಕಳಿದ್ದಾರೆ.
ಸದ್ಯ ಮೂರನೇ ಪತ್ನಿ ನಾಗರತ್ನಮ್ಮ ಹಾಗೇ ನಾಲ್ಕನೇ ಪತ್ನಿ ಪದ್ಮಾವತಿ ಇಬ್ಬರೂ ಕೂಡ ಗಂಡ ಬೇಕು ಎಂದು ಪಟ್ಟುಹಿಡಿದಿದ್ದಾರೆ.