ಭಾರತ ಮತ್ತು ಪಾಕಿಸ್ತಾನದ ನಡುವೆ ನೇರ ಚರ್ಚೆಗಳನ್ನು ಬೆಂಬಲಿಸುವುದಾಗಿ ಅಮೆರಿಕ ಹೇಳಿದೆ. ಆದರೆ, ಮಾತುಕತೆಯ ವೇಗ, ವ್ಯಾಪ್ತಿ ಮತ್ತು ಸ್ವರೂಪವನ್ನು ಉಭಯ ರಾಷ್ಟ್ರಗಳು ನಿರ್ಧರಿಸಬೇಕು ಎಂದು ತಿಳಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅಮೆರಿಕದ ವಕ್ತಾರ ಮ್ಯಾಥ್ಯೂ ಮಿಲ್ಲರ್, ಭಾರತ ಮತ್ತು ಪಾಕಿಸ್ತಾನದ ಜೊತೆಗಿನ ಅತ್ಯಂತ ಪ್ರಮುಖ ಸಂಬಂಧದ ಮೌಲ್ಯಗಳನ್ನು ಅಮೆರಿಕ ಗೌರವಿಸುತ್ತದೆ ಎಂದಿದ್ದಾರೆ.
ಇದೇವೇಳೆ, ಪ್ರಾದೇಶಿಕ ಭದ್ರತೆಗೆ ಇರುವ ಅಪಾಯಗಳನ್ನು ತೊಡೆದುಹಾಕುವ ನಿಟ್ಟಿನಲ್ಲಿ ಅಮೆರಿಕ ಮತ್ತು ಪಾಕಿಸ್ತಾನ ಪರಸ್ಪರ ಹಿತದೃಷ್ಟಿಯನ್ನು ಕಾಯ್ದುಕೊಂಡಿವೆ ಎಂದು ಹೇಳಿದ್ದಾರೆ.
‘ಭಯೋತ್ಪಾದನೆ ನಿಗ್ರಹ ಕುರಿತಾದ ತಮ್ಮ ಉನ್ನತ ಮಾತುಕತೆಯಲ್ಲಿ ಪಾಕಿಸ್ತಾನದ ಜೊತೆ ಸಹಭಾಗಿತ್ವ ಹೊಂದಿದ್ದೇವೆ. ಭಯೋತ್ಪಾದನೆ ನಿಗ್ರಹ ಸಾಮರ್ಥ್ಯವನ್ನು ವೃದ್ಧಿಸುವ ಮತ್ತು ಅದಕ್ಕೆ ಬೇಕಾದ ಅಮೆರಿಕ-ಪಾಕಿಸ್ತಾನ ನಡುವಿನ ಮಿಲಿಟರಿ ಟು ಮಿಲಿಟರಿ ಸರಣಿ ಸಹಭಾಗಿತ್ವವನ್ನು ಹೊಂದಿದ್ದೇವೆ’ಎಂದು ಹೇಳಿದ್ದಾರೆ.
ಭಯೋತ್ಪಾದನೆ ಸದೆಬಡಿಯುವ ಸಹಭಾಗಿತ್ವದ ಭಾಗವಾಗಿ ಪಾಕಿಸ್ತಾನದ ನಾಯಕರ ಜೊತೆ ನಾವು ನಿರಂತರ ಸಂಪರ್ಕ ಹೊಂದಿದ್ದೇವೆ. ಪ್ರಾದೇಶಿಕ ಭದ್ರತೆ ಕುರಿತಂತೆ ವಿವರವಾಗಿ ಚರ್ಚೆ ನಡೆಸುವುದನ್ನು ಮುಂದುವರಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.