ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ನಟ ಜಹೀರ್ ಇಕ್ಬಾಲ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇಂದು ಮುಂಬೈನಲ್ಲಿ ಸೋನಾಕ್ಷಿ ಸಿನ್ಹಾ ಮದುವೆ ಸಂಭ್ರಮ ನಡೆಯಲಿದ್ದು ಅದಕ್ಕೂ ಮುನ್ನ ಅಂದರೆ ಶುಕ್ರವಾರ (ಜೂನ್ 21) ಮೆಹಂದಿ ಶಾಸ್ತ್ರವೂ ಅದ್ಧೂರಿಯಾಗಿ ನೆರವೇರಿದೆ. ಮೆಹಂದಿ ಶಾಸ್ತ್ರದ ಮೊದಲ ಫೋಟೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮುಂಬೈನಲ್ಲಿ ನಡೆದ ಸೋನಾಕ್ಷಿ ಹಾಗೂ ಜಹೀರ್ ಮೆಹಂದಿ ಶಾಸ್ತ್ರದಲ್ಲಿ ಕುಟುಂಬಸ್ಥರು ಹಾಗೂ ಆಪ್ತರು ಭಾಗವಹಿಸಿದ್ದಾರೆ. ಸೋನಾಕ್ಷಿ ಸಿನ್ಹಾ ಅವರು ಜಹೀರ್ ಇಕ್ಬಾಲ್ ಹಾಗೂ ಗೆಳೆಯರೊಂದಿಗೆ ನಿಂತಿರುವ ಫೋಟೊ ಲಭ್ಯವಾಗಿದೆ. ಜಹೀರ್ ಇಕ್ಬಾಲ್ ಅವರ ಸಹೋದರಿ ಸನಮ್ ರತಾನ್ಸಿ ಅವರು ಇನ್ಸ್ಟಾಗ್ರಾಂನಲ್ಲಿ ಫೋಟೊ ಹಂಚಿಕೊಂಡಿದ್ದಾರೆ. ಜಹೀರ್ ಇಕ್ಬಾಲ್ ಕೂಡ ಕುರ್ತಾ ಧರಿಸಿ ಭಾವಿ ಪತ್ನಿಯೊಂದಿಗೆ ಮಿಂಚಿದ್ದಾರೆ.
ಮುಸ್ಲಿಂ ಯುವಕನ ಜತೆ ಮದುವೆಯಾಗುತ್ತಿರುವುದಕ್ಕೆ, ಅದರಲ್ಲೂ ಮದುವೆ ದಿನಾಂಕವನ್ನೂ ಹೇಳದಿರುವುದಕ್ಕೆ ಮೊದಲು ನಟ, ಸೋನಾಕ್ಷಿ ಸಿನ್ಹಾ ಅವರ ತಂದೆ ಶತ್ರುಘ್ನ ಸಿನ್ಹಾ ಅವರು ಇದಕ್ಕೂ ಮೊದಲು ಅಸಮಾಧಾನ ವ್ಯಕ್ತಪಡಿಸಿದ್ದರು. ಶತ್ರುಘ್ನ ಸಿನ್ಹಾ, ನಟಿಯ ತಾಯಿ ಹಾಗೂ ಸಹೋದರ ಕೂಡ ಭಾಗಿಯಾಗುವುದಿಲ್ಲ ಎಂದು ಹೇಳಲಾಗಿತ್ತು. ಆದರೆ, ವದಂತಿಗಳಿಗೆಲ್ಲ ಶತ್ರುಘ್ನ ಸಿನ್ಹಾ ಅವರು ತೆರೆ ಎಳೆದಿದ್ದಾರೆ. “ಮೊದಲು ಸಣ್ಣಪುಟ್ಟ ಗೊಂದಲಗಳು ಸೃಷ್ಟಿಯಾಗಿದ್ದವು. ಈಗ ಎಲ್ಲವೂ ಬಗೆಹರಿದಿದೆ. ಜೂನ್ 23ರಂದು ನಾವೆಲ್ಲ ಮದುವೆಗೆ ಹೋಗಲಿದ್ದೇವೆ” ಎಂದು ತಿಳಿಸಿದ್ದಾರೆ.
ಕಳೆದ ವಾರವಷ್ಟೇ ಸೋನಾಕ್ಷಿ ಅವರು ತಮ್ಮ ಬಹುಕಾಲದ ಗೆಳೆಯ ಜಹೀರ್ ಇಕ್ಬಾಲ್ ಅವರನ್ನು ವರಿಸುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದ್ದು, ಬಳಿಕ ಇದನ್ನು ಮದುವೆಯ ಆಮಂತ್ರಣವು ದೃಢಪಡಿಸಿತು. ಸೋನಾಕ್ಷಿ ಏಳು ವರ್ಷಗಳಿಂದ ಜಹೀರ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ. ಮದುವೆಯ ವದಂತಿಗಳಿಗೆ ಮೊದಲ ಪ್ರತಿಕ್ರಿಯೆ ನೀಡಿದ ಶತ್ರುಘ್ನ ಅವರು ಮದುವೆಯ ಬಗ್ಗೆ ತಿಳಿದಿರಲಿಲ್ಲ ಎಂದು ಒಪ್ಪಿಕೊಂಡರು. ಮಾತ್ರವಲ್ಲದೇ ಅವರು ಇದರಿಂದ ಅಸಮಾಧಾನಗೊಂಡಿರುವುದು ಅವರ ಹೇಳಿಕೆಯಿಂದ ಗೊತ್ತಾಗಿತ್ತು. ನಂತರ ಎಲ್ಲವು ಸರಿಯಾಗಿದ್ದು ಮದುವೆಗೆ ಯಾಕೆ ಹೋಗಬಾರದು.ನಾನು ಹೋಗಿಯೇ ಹೋಗುತ್ತೇನೆ. ಅವರಿಬ್ಬರ ಜೋಡಿ ತುಂಬಾ ಚೆನ್ನಾಗಿದೆ. ಅವರಿಬ್ಬರು ಯಾವಾಗಲು ಸುಖವಾಗಿ ಬಾಳಬೇಕು ಎಂದಿದ್ದರು.