ಮುಂಬೈ: ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ (WPL 2023) ಸತತ 5 ಪಂದ್ಯಗಳಲ್ಲಿ ಸೋಲನುಭವಿಸುವ ಮೂಲಕ ಆರ್ಸಿಬಿ ತಂಡ ಬಹುತೇಕ ಟೂರ್ನಿಯಿಂದ ಹೊರಬಿದ್ದಿದೆ. ಸೋಮವಾರ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡವು ಆರ್ಸಿಬಿ ವಿರುದ್ಧ ರೋಚಕ ಜಯ ಸಾಧಿಸಿದ್ದು, ಆರ್ಸಿಬಿ (RCB) ತಂಡದ ಗೆಲುವಿನ ಕನಸಿಗೆ ತಣ್ಣೀರು ಎರಚಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸ್ಮೃತಿ ಮಂದಾನ ನಾಯಕತ್ವದ ಆರ್ಸಿಬಿ ತಂಡ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿತ್ತು. 151 ರನ್ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 19.4 ಓವರ್ಗಳಲ್ಲಿ 154 ರನ್ ಬಾರಿಸಿ ರೋಚಕ ಜಯ ಸಾಧಿಸಿದೆ.
ಕೊನೆಯ ಓವರ್ನಲ್ಲಿ ಡೆಲ್ಲಿ ತಂಡದ ಗೆಲುವಿಗೆ 9 ರನ್ಗಳ ಅಗತ್ಯವಿತ್ತು. ಈ ವೇಳೆ ಮೊದಲ ಎರಡು ಎಸೆತದಲ್ಲಿ ಒಂದೊಂದು ರನ್ ತಂಡಕ್ಕೆ ಸೇರ್ಪಡೆಯಾಯಿತು. ನಂತರ ಕ್ರೀಸ್ನಲ್ಲಿ ಉಳಿದ ಜೆಸ್ ಜೋನಾಸೆನ್ 3ನೇ ಎಸೆತವನ್ನು ಸಿಕ್ಸ್ಗೆ, 4ನೇ ಎಸೆತವನ್ನು ಬೌಂಡರಿಗಟ್ಟಿ ಇನ್ನೂ ಎರಡು ಎಸೆತಗಳು ಬಾಕಿಯಿರುವಂತೆ ತಂಡವನ್ನು ಗೆಲ್ಲಿಸಿ ನಗೆಬೀರಿದರು.
ಆರಂಭಿಕ ಬ್ಯಾಟರ್ಗಳ ವೈಫಲ್ಯದಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಮೂರು ಮತ್ತು 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆಲಿಸ್ ಕ್ಯಾಪ್ಸಿ ಮತ್ತು ಜೆಮಿಮಾ ರೊಡ್ರಿಗಸ್ (Jemimah Rodrigues) ಉತ್ತಮ ಇನ್ನಿಂಗ್ಸ್ ಕಟ್ಟುವಲ್ಲಿ ಯಶಸ್ವಿಯಾದರು. ಕ್ಯಾಪ್ಸಿ 24 ಎಸೆತಗಳಲ್ಲಿ 8 ಬೌಂಡರಿಗಳೊಂದಿಗೆ 38 ರನ್ ಗಳಿಸಿದರೆ, ಜೆಮಿಮಾ 28 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ 32 ರನ್ ಕಲೆಹಾಕಿ ತಂಡಕ್ಕೆ ನೆರವಾದರು.
ನಂತರ ಮಾರಿಜಾನ್ನೆ ಕಪ್ ಹಾಗೂ ಜೆಸ್ ಜೊನಾಸೆನ್ (Jess Jonassen) ಜವಾಬ್ದಾರಿಯು ಬ್ಯಾಟಿಂಗ್ ನಿಂದ ತಂಡವನ್ನು ಗೆಲುವಿನ ಹಾದಿಗೆ ತಲುಪಿಸಿದರು. ತಾಳ್ಮೆಯ ಆಟವಾಡಿದ ಈ ಜೋಡಿ ಮುರಿಯದ 5ನೇ ವಿಕೆಟ್ಗೆ 45 ರನ್ ಕಲೆಹಾಕಿತು. ಮಾರಿಜಾನ್ನೆ ಕಪ್ 32 ಎಸೆತಗಳಲ್ಲಿ 32 ರನ್ (3 ಬೌಂಡರಿ, 1 ಸಿಕ್ಸರ್) ಗಳಿಸಿದ್ರೆ, ಜೊನಾಸೆನ್ 15 ಎಸೆತಗಳಲ್ಲಿ ಭರ್ಜರಿ 29 ರನ್ (4 ಬೌಂಡರಿ, 1 ಸಿಕ್ಸರ್) ಚಚ್ಚಿ ಮಿಂಚಿದರು.
ಡೆಲ್ಲಿ ತಂಡದ ಪರ ನಾಯಕಿ ಮೆಗ್ ಲ್ಯಾನಿಂಗ್ (Meg Lanning) 15 ರನ್ ಗಳಿಸಿದ್ರೆ, ಶಫಾಲಿ ವರ್ಮಾ ಶೂನ್ಯಕ್ಕೆ ನಿರ್ಗಮಿಸಿದರು. ಆರ್ಸಿಬಿ ಪರ ಸೋಭಾನ ಆಶಾ 2 ವಿಕೆಟ್ ಪಡೆದರೆ, ಮೇಗನ್ ಶುಟ್ ಹಾಗೂ ಪ್ರೀತಿ ಬೋಸ್ ತಲಾ ಒಂದೊಂದು ವಿಕೆಟ್ ಪಡೆದರು.
ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ತಂಡದ ನಾಯಕಿ ಸ್ಮೃತಿ ಮಂದಾನ (Smriti Mandhana) ಮತ್ತೊಮ್ಮೆ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿ ಟೀಕೆಗೆ ಗುರಿಯಾದರು. 15 ಎಸೆತಗಳಲ್ಲಿ 8 ರನ್ ಗಳಿಸಿ ಮಂದಾನ ವಿಕೆಟ್ ಒಪ್ಪಿಸಿದರು. ಈ ಬೆನ್ನಲ್ಲೇ ಸೋಫಿ ಡಿವೈನ್ 21 ರನ್ ಗಳಿಸಿ ಔಟಾದರು. ನಂತರ ಬಂದ ಎಲ್ಲಿಸ್ ಪೆರ್ರಿ 52 ಎಸೆತಗಳಲ್ಲಿ 4 ಬೌಂಡರಿ ಮತ್ತು 5 ಸಿಕ್ಸರ್ಗಳ ನೆರವಿನಿಂದ 67 ರನ್ ಬಾರಿಸಿ ತಂಡಕ್ಕೆ ನೆರವಾದರು. ಈ ವೇಳೆ ಜೊತೆಗೂಡಿದ ರಿಚಾ ಘೋಷ್ 16 ಎಸೆತಗಳಲ್ಲಿ ಸ್ಫೋಟಕ 37 ರನ್ (3 ಬೌಂಡರಿ, 3 ಸಿಕ್ಸರ್) ಬಾರಿಸಿದರೆ, ಕೊನೆಯಲ್ಲಿ ಬಂದ ಶ್ರೇಯಾಂಕ ಪಾಟೀಲ್ 4 ರನ್ ಗಳಿಸಿದರು. ಹೀದರ್ ನೈಟ್ 11 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಶಿಖಾ ಪಾಂಡೆ 4 ಓವರ್ಗಳಲ್ಲಿ 23 ರನ್ ನೀಡಿ 3 ವಿಕೆಟ್ ಪಡೆದರೆ, ತಾರಾ ನಾರ್ರಿಸ್ 3 ಓವರ್ಗಳಲ್ಲಿ 25 ರನ್ ನೀಡಿ 1 ವಿಕೆಟ್ ಪಡೆದರು.