ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಲ್ಲಿ ನಟ ದರ್ಶನ್ ಸೇರಿ ಇಡೀ ಗ್ಯಾಂಗ್ ಜೈಲು ಸೇರಿದೆ. ಮೂರು ಬಾರಿ ಕಸ್ಟಡಿಗೆ ಪಡೆದು ವಿಚಾರಣೆ ಬಳಿಕ ನಿನ್ನೆ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ. 13 ವರ್ಷಗಳ ಬಳಿಕ ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಮೌನಕ್ಕೆ ಶರಣಾಗಿದ್ದಾರೆ.
ಪವಿತ್ರಾ ಗೌಡ ಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ದರ್ಶನ್ ಎಂಡ್ ಗ್ಯಾಂಗ್ ಕಿಡ್ನ್ಯಾಪ್ ಮಾಡಿ ಭೀಕರವಾಗಿ ಹತ್ಯೆ ಮಾಡಿತ್ತು. ಇದೀಗ ಘಟನೆಯ ಕುರಿತು ಎಲ್ಲಾ 17 ಆರೋಪಿಗಳನ್ನು ಬಂಧಿಸಿರೋ ಪೊಲೀಸರು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ.
ದರ್ಶನ್ ಕೋರ್ಟ್ ಗೆ ಹಾಜರಾಗುತ್ತಾರೆ ಎಂದು ಸುದ್ದಿ ಕೇಳಿದ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಕೋರ್ಟ್ ಮುಂದೆ ನೆರೆದಿದ್ದರು. ಇವರನ್ನು ಕಂಟ್ರೋಲ್ ಮಾಡೋದೆ ಪೊಲೀಸರಿಗೆ ದೊಡ್ಡ ತಲೆ ನೋವಾಗಿತ್ತು. ಈ ವೇಳೆ ದರ್ಶನ್ ಪೊಲೀಸ್ ವ್ಯಾನ್ನಿಂದಲೇ ಅಭಿಮಾನಿಗಳತ್ತ ಕೈ ಬೀಸಿ ತೆರಳಿದ ದರ್ಶನ್ ಮುಖದಲ್ಲಿ ಮೇಲ್ನೋಟಕ್ಕೆ ನಗು ಕಾಣ್ತಿತ್ತು. ಆದರೆ ಮನಸ್ಸಿನ ತುಂಬಾ ಹತಾಶೆಯ ಭಾವ ತುಂಬಿಕೊಂಡಿತ್ತು. ಭದ್ರತೆಯ ದೃಷ್ಟಿಯಿಂದ ನಟ ದರ್ಶನ್ನನ್ನ ಪರಪ್ಪನ ಅಗ್ರಹಾರ ಜೈಲಿನ ಪ್ರತ್ಯೇಕ ಕೊಠಡಿಯಲ್ಲಿ ಇರಿಸಿದ್ದು ಕೈದಿ ಸಂಖ್ಯೆ 6106 ಅನ್ನು ನೀಡಲಾಗಿದೆ. ಜೈಲಿಗೆ ತೆರಳ್ತಿದ್ದಂತೆ ನಟ ದರ್ಶನ್ ಮೌನಕ್ಕೆ ಶರಣಾಗಿದ್ದು ಸರಿಯಾಗಿ ಊಟ ಮಾಡದೆ ಕಣ್ಣು ತುಂಬಾ ನಿದ್ರೆ ಮಾಡದೆ ಚಡಪಡಿಸಿದ್ದಾರೆ.
ಪರಪ್ಪನ ಅಗ್ರಹಾರ ಜೈಲು ಸಿಬ್ಬಂದಿ ನಟ ದರ್ಶನ್ಗೆ ನಿನ್ನೆ ರಾತ್ರಿ ಊಟಕ್ಕೆ ಚಪಾತಿ, ಅನ್ನ, ಮಜ್ಜಿಗೆ ನೀಡಿದ್ದಾರೆ. ಚಪಾತಿ ಮಾತ್ರ ತಿಂದು ಮಜ್ಜಿಗೆ ಕುಡಿದಿರುವ ನಟ ದರ್ಶನ್ ಜೈಲು ಸಿಬ್ಬಂದಿ ಕೊಟ್ಟ ಅನ್ನ ತಿನ್ನಲು ಒಲ್ಲೆ ಎಂದಿದ್ದಾರಂತೆ. ರಾತ್ರಿ 8 ಗಂಟೆ ಸುಮಾರಿಗೆ ಜೈಲೂಟ ಸೇವಿಸಿದ ದರ್ಶನ್ ಯಾರ ಜೊತೆಗೂ ಮಾತನಾಡದೇ ಮೌನಕ್ಕೆ ಜಾರಿದ್ದಾರೆ.
ಇನ್ನು ಕೊಲೆ ಆರೋಪಿಗಳು ಈಗಾಗಲೇ ಒಳಸಂಚಿನಲ್ಲಿ ಭಾಗಿಯಾಗಿದ್ದಾರೆ. ಎಲ್ಲರನ್ನೂ ಒಂದೇ ಜೈಲಿನಲ್ಲಿ ಇರಿಸಿದ್ರೆ ಸಂಚು ರೂಪಿಸುವ ಸಾಧ್ಯತೆ ಇದೆ. ಹೀಗಾಗಿ ಆರೋಪಿಗಳನ್ನು ಪ್ರತ್ಯೇಕವಾಗಿ ರಾಜ್ಯದ ವಿವಿಧ ಜೈಲುಗಳಲ್ಲಿ ಇರಿಸಲು ನಿರ್ದೇಶಿಸುವಂತೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನ್ಯಾಯಾಲಯಕ್ಕೆ ಮನವಿ ಮಾಡಿದರು. ಈ ಬಗ್ಗೆ ಸೋಮವಾರ ಮತ್ತೆ ವಿಚಾರಣೆ ನಡೆಯಲಿದ್ದು ದರ್ಶನ್ ಯಾವ ಜೈಲಿನಲ್ಲಿ ಇರಲಿದ್ದಾರೆ ಅನ್ನೋ ತೀರ್ಪು ಹೊರ ಬೀಳಲಿದೆ.