ಬೆಂಗಳೂರು: ಈ ಬಾರಿ ಯುಗಾದಿ ಹಬ್ಬಕ್ಕೆ ಊರಿಗೆ ಹೋಗುವವರಿಗೆ ರಾಜ್ಯ ಸಾರಿಗೆ ನೌಕರರ ಸಂಘ (KSRTC Staff And Workers Union) ಬಿಗ್ ಶಾಕ್ ಕೊಟ್ಟಿದೆ. ಯುಗಾದಿ ಹಬ್ಬಕ್ಕೂ (Ugadi Festival) ಮುನ್ನಾ ದಿನ ಅಂದ್ರೆ ಮಾರ್ಚ್ 21ರಂದು ರಾಜ್ಯಾದ್ಯಂತ ಮುಷ್ಕರಕ್ಕೆ ಕರೆ ಕೊಟ್ಟಿದೆ.
ಮಾಚ್ 21ರಂದು ಬೆಳಗ್ಗೆ 6 ಗಂಟೆಯಿಂದ ಮುಷ್ಕರ ಆರಂಭವಾಗಲಿದೆ ಎಂದು ರಾಜ್ಯ ಸಾರಿಗೆ ನೌಕರರ ಸಂಘದ ಅಧ್ಯಕ್ಷ ಅನಂತ್ ಸುಬ್ಬಾರಾವ್ (Anantha Subbarao) ತಿಳಿಸಿದ್ದಾರೆ.
ಈ ಸಂಬಂಧ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿರುವ ಅವರು, ಮುಂದಿನ ಮಂಗಳವಾರ ನಮ್ಮ ಮುಷ್ಕರ ನಡೆಯಲಿದೆ. 1 ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದು, ಸುಮಾರು 23 ಸಾವಿರ ಬಸ್ಗಳು ಸ್ಥಗಿತಗೊಳ್ಳಲಿವೆ. ಯಾವುದೇ ಕಾರಣಕ್ಕೂ ಡಿಪೋದಿಂದ ಬಸ್ಗಳನ್ನು ತೆಗೆಯಲ್ಲ ಎಂದು ಹೇಳಿದ್ದಾರೆ.
ಸರ್ಕಾರಿ ನೌಕರರ ಪ್ರತಿಭಟನೆ ನಡೆದಾಗ ಶೇ.17 ವೇತನ ಹೆಚ್ಚಳ ಮಾಡಿದ್ರು. ಆದ್ರೆ ನಮಗೆ ಇನ್ನೂ ವೇತನ ಹೆಚ್ಚಳದ ಬಗ್ಗೆ ಮಾಹಿತಿ ಕೊಟ್ಟಿಲ್ಲ. ಸಾರಿಗೆ ಇಲಾಖೆ ಆಡಳಿತ ಮಂಡಳಿ ಬೇಡಿಕೆಗಳನ್ನೆಲ್ಲಾ ಮುಖ್ಯಮಂತ್ರಿಗಳ ಅಂಗಳಕ್ಕೆ ಹಾಕಿಬಿಟ್ಟಿದ್ದಾರೆ. ಇದರಿಂದ ಏನೇ ದುಷ್ಪರಿಣಾಮ ಆದರೂ ನೇರವಾಗಿ ಅವರೇ ಹೊಣೆಯಾಗುತ್ತಾರೆ ಎನ್ನುವಂತೆ ಮಾಡಿದೆ. ಈವರೆಗೆ ಪ್ರತಿಕ್ರಿಯಿಸದೇ ಇರುವುದರಿಂದ ಮುಷ್ಕರಕ್ಕೆ ಕರೆ ನೀಡುತ್ತಿದ್ದೇವೆ. ಜನ ನಮ್ಮನ್ನ ಕ್ಷಮಿಸಬೇಕು. ಹೋರಾಟ ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.
ರಾಜ್ಯಾದ್ಯಂತ ಮುಷ್ಕರ ಕೈಗೊಳ್ಳಲು ವಿವಿಧ ಸಂಘಟನೆಗಳಿಗೆ ಮನವಿ ಮಾಡಿದ್ದೇವೆ. ಕೆಲ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ನೀಡಿವೆ ಎಂದು ಹೇಳಿದ್ದಾರೆ.
ಸಾರಿಗೆ ನೌಕರರ ಬೇಡಿಕೆ ಏನು?
– ಮೂಲವೇತನ ಶೇ.25 ರಷ್ಟು ಹೆಚ್ಚಿಸಬೇಕು.
– ಬಾಟಾ/ಭತ್ಯೆಯನ್ನು 5 ಪಟ್ಟು ಹೆಚ್ಚಿಸಲು ಆಗ್ರಹ
– ಏಪ್ರಿಲ್ 2011 ರಂದು ವಜಾಗೊಂಡ ಸಿಬ್ಬಂದಿಯನ್ನು ಮರುನೇಮಕ ಮಾಡಬೇಕು
– ಸಿಬ್ಬಂದಿ ಮೇಲೆ ದಾಖಲಾಗಿರುವ ಕೇಸ್ಗಳನ್ನ ರದ್ದು ಮಾಡಬೇಕು.
– ಮುಷ್ಕರ ಸಮಯದಲ್ಲಿ ವರ್ಗಾವಣೆಯಾದ ನೌಕರರನ್ನು ಮೊದಲಿದ್ದ ಸ್ಥಳಕ್ಕೆ ಮತ್ತೆ ನಿಯುಕ್ತಿಗೊಳಿಸಬೇಕು.