ಚಿತ್ರದುರ್ಗದ ರೇಣುಕಾಸ್ವಾಮಿ ಕಿಡ್ನಾಪ್ ಹಾಗೂ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ದರ್ಶನ್ ಇರುವ ಕೊಠಡಿಗೆ ಪೊಲೀಸರು ಬಿಗಿ ಪೊಲೀಸ್ ಭದ್ರತೆ ನಿಯೋಜಿಸಿದ್ದಾರೆ.
ಬ್ಯಾರಕ್ ನಂ.3 ರ ಭದ್ರತಾ ಕೊಠಡಿಯಲ್ಲಿರೋ ದರ್ಶನ್ ಗೆ ಜೈಲಿನ ಇನ್ಸ್ ಪೆಕ್ಟರ್ ಮತ್ತು ಮೂವರು ಸಿಬ್ಬಂದಿ ಭದ್ರತೆ ನೀಡುತ್ತಿದ್ದಾರೆ. ದರ್ಶನ್ ನೋಡಲು ಜೈಲಿನ ಕೈದಿಗಳು ಬರವ ಸಾಧ್ಯತೆಗಳಿವೆ. ಹೀಗಾಗಿ ಬ್ಯಾರಕ್ 3 ಬಳಿ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದಾರೆ ಎನ್ನಲಾಗಿದೆ.
ಸೋಮವಾರ ದರ್ಶನ್ ಭೇಟಿಗೆ ಬಂದಿದ್ದ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ ಗೆ 15 ನಿಮಿಷ ಭೇಟಿಗೆ ಅವಕಾಶ ನೀಡಲಾಗಿತ್ತು. ಇದೀಗ ದರ್ಶನ್ ಭೇಟಿಗೆ ಯಾರಿಗೂ ಅವಕಾಶವಿಲ್ಲ. ದರ್ಶನ್ ಯಾರ ಸಂಪರ್ಕಕ್ಕೂ ಸಿಗದಂತೆ ಜೈಲಾಧಿಕಾರಿಗಳು ಭದ್ರತೆ ವಹಿಸಿದ್ದಾರೆ. ಊಟ, ತಿಂಡಿ ಅಂತಾ ಯಾವುದೇ ಸಮಯದಲ್ಲೂ ಜೈಲಿನ ಕೈದಿಗಳು ದರ್ಶನ್ ಬ್ಯಾರಕ್ ಬಳಿ ಬರದಂತೆ ಟೈಟ್ ಸೆಕ್ಯೂರಿಟಿ ನೀಡಿದ್ದಾರೆ.
ಇನ್ನು ಬ್ಯಾರಕ್ ನಲ್ಲಿ ತನ್ನ ಜೊತೆಗಿದ್ದವರ ಜೊತೆಯೇ ದರ್ಶನ್ ಸರಿಯಾಗಿ ಮಾತನಾಡುತ್ತಿಲ್ಲ. ಮಾನಸಿಕವಾಗಿ ಕುಗ್ಗಿರೋ ನಟ ಭದ್ರತಾ ಕೊಠಡಿಯಲ್ಲಿ ಮೌನಕ್ಕೆ ಜಾರಿದ್ದಾರೆ ಎನ್ನಲಾಗುತ್ತಿದೆ.