ಬಹುಭಾಷಾ ನಟಿ ಪಾಯಲ್ ಘೋಷ್ ಸೋಷಿಯಲ್ ಮೀಡಿಯಾದಲ್ಲಿ ಆತ್ಮಹತ್ಯೆ ಪತ್ರ ಹಂಚಿಕೊಂಡು ಸಂಚಲನ ಮೂಡಿಸಿದ್ದಾರೆ. ಸೂಸೈಡ್ ನೋಟ್ ಬರೆದಿರುವ ಪೇಪರ್ನ್ನು ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ವರ್ಷಧಾರೆ ನಟಿ ಚರ್ಚೆಗೆ ಗ್ರಾಸವಾಗಿದ್ದಾರೆ.
ತೆಲುಗು, ಹಿಂದಿ ಮತ್ತು ಕನ್ನಡ ಸಿನಿಮಾದಲ್ಲೂ ನಟಿ ಪಾಯಲ್ ನಟಿಸಿದ್ದಾರೆ. ಕನ್ನಡದ `ವರ್ಷಧಾರೆ’ ಚಿತ್ರದಲ್ಲಿ ನಟಿಸಿದ್ದು, ಹಿಂದಿ ಕಿರುತೆರೆಯ `ಸಾಥ್ ನಿಭಾನಾ ಸಾಥಿಯಾ’ ಸೀರಿಯಲ್ನಲ್ಲಿ ರಾಧಿಕಾ ಎಂಬ ಪಾತ್ರದ ಮೂಲಕ ಗಮನ ಸೆಳೆದಿದ್ದರು.
ಕಳೆದ ವರ್ಷ ಮುಸುಕುಧಾರಿ ದುಷ್ಕರ್ಮಿಗಳು ಆ್ಯಸಿಡ್ ದಾಳಿ ನಡೆಸಲು ಪ್ರಯತ್ನಿಸಿದ್ದರು ಎಂದು ನಟಿ ಪಾಯಲ್ ಹೇಳಿದ್ದರು. ರಾತ್ರಿ 10 ಗಂಟೆಗೆ ಔಷಧಿ ತರಲು ಹೋಗಿದ್ದಾಗ ನಡೆದ ಘಟನೆಯಿದು. ನಟಿಯ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಈ ವೇಳೆ ನಟಿಯ ಕೈಗೆ ರಾಡ್ನಿಂದ ಪೆಟ್ಟು ಬಿದ್ದಿತ್ತು. ಈ ಬಗ್ಗೆ ಪಾಯಲ್ ತಿಳಿಸಿದ್ದರು. ಇದಾದ ಬಳಿಕ ಅವರು ಕುಗ್ಗಿ ಹೋಗಿದ್ದರು. ಈಗ ಸೂಸೈಡ್ ನೋಟ್ ಬರೆದಿರುವ ನಟಿಯ ನಡೆ ಬಗ್ಗೆ ಫ್ಯಾನ್ಸ್ ಆತಂಕ ವ್ಯಕ್ತಪಡಿಸಿದ್ದಾರೆ.
ಇದೀಗ ನಟಿ ಪಾಯಲ್ ಅವರು ಸೂಸೈಡ್ ನೋಟ್ ಬರೆದಿರುವ ಪೇಪರ್ ಮುಂಬೈನ ತಾಜ್ಮಹಲ್ ಟವರ್ ಎಂದು ಉಲ್ಲೇಖಗೊಂಡಿದೆ. ಅದರಲ್ಲಿ, “ನಾನು ಪಾಯಲ್ ಘೋಷ್. ನಾನು ಆತ್ಮಹತ್ಯೆ ಅಥವಾ ಹೃದಯಾಘಾತದಿಂದ ಸತ್ತರೆ ಅದಕ್ಕೆ ಇವರೇ ಕಾರಣ” ಎಂದು ಬರೆದುಕೊಂಡಿದ್ದಾರೆ. ಅವರು ಯಾರ ಹೆಸರನ್ನೂ ಹೇಳಿಲ್ಲ, ಯಾವುದೇ ಸೂಚನೆಯನ್ನೂ ನೀಡಿಲ್ಲ. ಇದರಿಂದ ಜನರೂ ಗೊಂದಲಕ್ಕೆ ಸಿಲುಕಿದ್ದಾರೆ.