ಅಪಾರ್ಟ್ ಮೆಂಟ್ಗಳ ಮೇಲೆ ದುಷ್ಕರ್ಮಿಯೋರ್ವ ಗುಂಡಿನ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ಐವರು ಸಾವನ್ನಪ್ಪಿದ್ದು, 13 ವರ್ಷದ ಬಾಲಕ ಗಂಭೀರ ಗಾಯಗೊಂಡಿರುವ ಘಟನೆ ಲಾಸ್ ವೇಗಾಸ್ನಲ್ಲಿ ನಡೆದಿದೆ.
ಗುಂಡಿನ ದಾಳಿ ನಡೆಸಿದ ಶಂಕಿತನನ್ನು ಎರಿಕ್ ಆಡಮ್ಸ್ (47) ಎಂದು ಗುರುತಿಸಲಾಗಿದೆ. ಘಟನೆಯ ಬಳಿಕ ಈತನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.
ಎರಿಕ್ ಆಡಮ್ಸ್ ಸೋಮವಾರ ತಡರಾತ್ರಿ ಅದೇ ಸಂಕೀರ್ಣದಲ್ಲಿರುವ ಎರಡು ನಾರ್ತ್ ಲಾಸ್ ವೇಗಾಸ್ ಅಪಾರ್ಟ್ಮೆಂಟ್ಗಳಲ್ಲಿ ನಾಲ್ವರು ಮಹಿಳೆಯರು ಮತ್ತು ಓರ್ವ ಪುರುಷನನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ಶಂಕಿಸಲಾಗಿದೆ. ಶಂಕಿತ ನ ಸುಳಿವಿನ ಮೇರೆಗೆ ಪೊಲೀಸರು ಆತನನ್ನು ಬಂಧಿಸಲು ತೆರಳಿದಾಗ ಆತ ಸ್ಥಳದಿಂದ ಪರಾರಿಯಾಗಿದ್ದಾನೆ. ಬಳಿಕ ಶೂಟೌಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಈ ಘಟನೆಯ ಹಿಂದಿರುವ ಉದ್ದೇಶ ಏನು ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.