ರಾಮನಗರ: ಮಂಡ್ಯದಲ್ಲಿ (Mandya) ಬಿಜೆಪಿ (BJP), ಕಾಂಗ್ರೆಸ್ (Congress), ರೈತಸಂಘ ಸೇರಿ ನನಗೆ ಚಕ್ರವ್ಯೂಹ ರಚಿಸಿ ಸೋಲಿಸಿದ್ರು. ಈಗ ರಾಮನಗರದಲ್ಲೂ (Ramanagara) ಆ ಸಂಚು ನಡೆಯುತ್ತಿದೆ ಎಂದು ರಾಮನಗರ ಕ್ಷೇತ್ರದ ಚುನಾವಣಾ ಅಭ್ಯರ್ಥಿಯೂ ಆಗಿರುವ ಜೆಡಿಎಸ್ ಮುಖಂಡ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಪ್ರತಿಪಕ್ಷಗಳ ವಿರುದ್ಧ ಕಿಡಿ ಕಾರಿದ್ದಾರೆ.
ರಾಮನಗರ ಕ್ಷೇತ್ರದಿಂದ ಸಂಸದ ಡಿ.ಕೆ ಸುರೇಶ್ (DK Suresh) ಸ್ಪರ್ಧೆ ಮಾಡುವ ವಿಚಾರ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದ್ರೂ ಸ್ಪರ್ಧೆ ಮಾಡಬಹುದು. ಅಭ್ಯರ್ಥಿಗಳ ಸ್ಪರ್ಧೆ ಬಗ್ಗೆ ಅವರ ಪಕ್ಷದ ಹೈಕಮಾಂಡ್ ನಾಯಕರು ತೀರ್ಮಾನ ಮಾಡ್ತಾರೆ ಎಂದು ಹೇಳಿದ್ದಾರೆ.
ಸಿ.ಎಂ ಇಬ್ರಾಹಿಂ (CM Ibrahim) ಹಾಗೂ ಹೆಚ್.ಡಿ ದೇವೇಗೌಡರು (HD Devegowda) ರಾಮನಗರದಲ್ಲಿ ಸ್ಪರ್ಧಿಸಲು ನನಗೆ ಅವಕಾಶ ಕೊಟ್ಟಿದ್ದಾರೆ. ನನ್ನ ಪಕ್ಷದ ಬಗ್ಗೆ ನಾನು ಮಾತನಾಡಬಹುದು. ಆದರೆ ಬೇರೆ ಪಕ್ಷದ ಬಗ್ಗೆ ಮಾತನಾಡುವ ಸೂಕ್ತ ವ್ಯಕ್ತಿ ನಾನಲ್ಲ. ಸೋಲಿಸೋದು, ಟಾರ್ಗೆಟ್ ಮಾಡೋದು ನಮ್ಮ ಕೈಯಲ್ಲಿಲ್ಲ. ಎಲ್ಲವನ್ನೂ ಜನ ತೀರ್ಮಾನ ಮಾಡ್ತಾರೆ. ರಾಮನಗರದ ಜನತೆ 1994ರಲ್ಲಿ ದೇವೇಗೌಡರನ್ನ ಆಯ್ಕೆ ಮಾಡಿದ್ದರು. 2004ರಲ್ಲಿ ಕುಮಾರಸ್ವಾಮಿ ಅವರನ್ನ ಆಯ್ಕೆ ಮಾಡಿದ್ದರು. ಅಲ್ಲಿಂದ ಸತತವಾಗಿ ನಾವು ರಾಮನಗರದಲ್ಲಿ ಗೆಲುವು ಸಾಧಿಸಿದ್ದೇವೆ ಎಂದು ತಿಳಿಸಿದ್ದಾರೆ.
ಅಭಿವೃದ್ಧಿ ವಿಚಾರದಲ್ಲಿ ನಾವು ಕ್ಷೇತ್ರದ ಜನರಿಗೆ ಅನ್ಯಾಯ ಮಾಡಿಲ್ಲ. ನಮ್ಮ ಸೇವೆಯನ್ನ ಜನ ಗುರುತಿಸಿದ್ದಾರೆ. ಮಂಡ್ಯದಲ್ಲಿ ಬಿಜೆಪಿ, ಕಾಂಗ್ರೆಸ್, ರೈತಸಂಘ ಸೇರಿ ನನಗೆ ಚಕ್ರವ್ಯೂಹ ರಚಿಸಿ ಸೋಲಿಸಿದ್ರು. ನಾನು ಸೋತಿದ್ದರೂ 5 ಲಕ್ಷಕ್ಕೂ ಅಧಿಕ ಮತ ಪಡೆದಿದ್ದೆ, ಹಾಗಾಗಿ ನನ್ನ ಪ್ರಕಾರ ಅದು ಸೋಲಲ್ಲ. ಅದೇ ರೀತಿಯಲ್ಲಿ ರಾಮನಗರದಲ್ಲೂ ಚಕ್ರವ್ಯೂಹ ರಚಿಸಲು ಸಂಚು ನಡೆಯುತ್ತಿದೆ. ರಾಮನಗರದಲ್ಲಿ ಬಿಜೆಪಿ, ಕಾಂಗ್ರೆಸ್ ಒಗ್ಗಟ್ಟಾಗಿ ರಾಜಕೀಯ ಲೆಕ್ಕಾಚಾರ ಮಾಡ್ತಿದ್ದಾರೆ. ಆದರೆ ಅಂತಿಮ ತೀರ್ಮಾನ ಮತದಾರರು ಮಾಡ್ತಾರೆ. ಜನ ನನಗೆ ಹಾಲು ಕೊಡ್ತಾರಾ ಅಥವಾ ವಿಷ ಕೊಡ್ತಾರಾ ಅನ್ನೋದು ಅವರಿಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ.