ಟಿ20 ವಿಶ್ವಕಪ್ ಕ್ರಿಕೆಟ್ನಲ್ಲಿ ಬಾಂಗ್ಲಾದೇಶದ ವಿರುದ್ಧ ಗೆಲುವು ಸಾಧಿಸಿ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದ್ದ ಅಫ್ಘಾನಿಸ್ತಾನ ತಂಡದ ಸಾಧನೆಯ ಹಿಂದೆ ಬಿಸಿಸಿಐ ಪಾಲಿದೆ. ಹೌದು. ಆಂತರಿಕ ಕಿತ್ತಾಟದಿಂದ ನಲುಗಿ ಹೋಗಿದ್ದ ಅಫ್ಘಾನಿಸ್ತಾನಕ್ಕೆ ಆರ್ಥಿಕ ಸಹಕಾರ ನೀಡಿ ಆಟಗಾರರನ್ನು ಬಿಸಿಸಿಐ ಪ್ರೋತ್ಸಾಹಿಸಿದ ಪರಿಣಾಮ ಕ್ರಿಕೆಟ್ ಟೂರ್ನಿಗಳಲ್ಲಿ ಅಫ್ಘಾನ್ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ಈ ಹಿಂದೆ ಪಾಕಿಸ್ತಾನದಲ್ಲಿ ಅಫ್ಘಾನಿಸ್ತಾನ ತಂಡಕ್ಕೆ ತರಬೇತಿ ಸಿಕ್ಕಿತ್ತು. ಆದರೆ ತರಬೇತಿ ಅಷ್ಟೇನು ಚೆನ್ನಾಗಿ ಸಿಗದ ಕಾರಣ ಬಿಸಿಸಿಐ 2015ರಲ್ಲಿ ಅಫ್ಘಾನಿಸ್ತಾನ ತಂಡಕ್ಕೆ ನೆರವು ನೀಡಲು ಆರಂಭಿಸಿತು. ಗ್ರೇಟರ್ ನೋಯ್ಡಾದಲ್ಲಿರುವ ವಿಜಯ್ ಸಿಂಗ್ ಸ್ಫೋರ್ಟ್ಸ್ ಕಾಂಪ್ಲೆಕ್ಸ್ ಅಫ್ಘಾನಿಸ್ತಾನದ ಹೋಮ್ ಗ್ರೌಂಡ್ ಆಗಿತ್ತು.
ಶಾರ್ಜಾದಿಂದ ನೋಯ್ಡಾಕ್ಕೆ ಶಿಫ್ಟ್ ಆಗಿದ್ದ ಅಫ್ಘಾನಿಸ್ತಾನ 2017ರಲ್ಲಿ ಗ್ರೇಟರ್ ನೋಯ್ಡಾದಲ್ಲೇ ಐರ್ಲೆಂಡ್ ವಿರುದ್ಧ ಸರಣಿ ಆಡಿತ್ತು.
ಅಫ್ಘಾನಿಸ್ತಾನ ಡೆಹ್ರಾಡೂನ್ನಲ್ಲಿ ಬಾಂಗ್ಲಾದೇಶದ ವಿರುದ್ಧ ಟಿ20 ಸರಣಿ ಸಹ ಆಯೋಜಿಸಿತ್ತು. ಟೀಂ ಇಂಡಿಯಾದ ಮಾಜಿ ಆಟಗಾರರಾದ ಲಾಲ್ಚಂದ್ ರಜಪುತ್ ಮತ್ತು ಮನೋಜ್ ಪ್ರಭಾಕರ್ ಅವರು ಕೋಚ್ ಆಗಿ ಮಾರ್ಗದರ್ಶನ ಸಹ ನೀಡಿದ್ದರು. ಸಂಬಂಧ ಮತ್ತಷ್ಟು ಉತ್ತಮವಾಗುತ್ತಿದ್ದಂತೆ ಬೆಂಗಳೂರಿನಲ್ಲಿ ನಡೆದ ಟೆಸ್ಟ್ ಪಂದ್ಯಕ್ಕೆ ಬಿಸಿಸಿಐಅಫ್ಘಾನಿಸ್ತಾನದ ಅಧ್ಯಕ್ಷರಾಗಿದ್ದ ಅಶ್ರಫ್ ಘನಿ ಅವರನ್ನು ಆಹ್ವಾನಿಸಿತ್ತು. ಅಂದು ಅಶ್ರಫ್ ಘನಿ ಟ್ವೀಟ್ ಮಾಡಿ ಅಫ್ಘಾನ್ ಆಟಗಾರರಿಗೆ ತಮ್ಮ ಕೌಶಲ್ಯವನ್ನು ತೋರಿಸಲು ವೇದಿಕೆಯನ್ನು ನೀಡಿದ್ದಕ್ಕಾಗಿ ನಾನು ನಮ್ಮ ಭಾರತೀಯ ಸ್ನೇಹಿತರಿಗೆ ಕೃತಜ್ಞನಾಗಿದ್ದೇನೆ ಎಂದು ಬರೆದು ಧನ್ಯವಾದ ತಿಳಿಸಿದ್ದರು.