ದೊಡ್ಡಬಳ್ಳಾಪುರ: ವೃದ್ದೆಯ ಬಾಯಿಗೆ ಬಟ್ಟೆ ತುರುಕಿ ಮಾಂಗಲ್ಯ ಸರ ಸೇರಿದಂತೆ ಧರಿಸಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲ್ಲೂಕಿನ ಕರೇನಹಳ್ಳಿ ಗ್ರಾಮದಲ್ಲಿ ನಡೆದಿದೆ.ನಾರಯಣಮ್ಮ( 72) ಚಿನ್ನ ಕಳೆದುಕೊಂಡಿರುವ ವೃದ್ದೆ..
ತಾಲೂಕಿನ ಕರೇನಹಳ್ಳಿ ಗ್ರಾಮದ ಹೊರವಲಯದ ಮಾ.9 ರಂದು ಜಮೀನಿನಲ್ಲಿ ವೃದ್ಧೆಯೊಬ್ಬರು ಹೊಂಗೆಕಾಯಿ ಅಯುತ್ತಿದ್ದರು, ಇದೇ ಸಮಯದಲ್ಲಿ ಹೊಂಗೆಕಾಯಿ ಉದುರಿಸುವ ನೆಪದಲ್ಲಿ ವೃದ್ಧೆಯ ಸಹಾಯಕ್ಕೆ ಬಂದ ದುಶ್ಕರ್ಮಿಗಳು ವೃದ್ದೆಯನ್ನು ಪರಿಚಯ ಮಾಡಿಕೊಂಡು ಬಾಯಿಗೆ ಬಟ್ಟೆ ತುರುಕಿ ಮಾಂಗಲ್ಯಸರ, ತಾಳಿ, 2 ಲಕ್ಷ್ಮಿ ಕಾಸು, ಕರಿಮಣಿ, ಚಿನ್ನದ ಗುಂಡುಗಳನ್ನು ಕದ್ದು ಪರಾರಿಯಾಗಿದ್ದಾರೆ.
ವೃದ್ದೆ ನಾರಾಯಣಮ್ಮ ಪ್ರತಿದಿನ ತನ್ನ ಬಳಿ ಇದ್ದ ಮೇಕೆಗಳನ್ನು ಮೇಯಿಸಲು ಅದೇ ಜಾಗಕ್ಕೆ ಬರುತ್ತಿದ್ದರು. ಇದೇ ವೇಳೆ ಹೊಂಗೆ ಮರದಡಿ ಬೀಳುವ ಕಾಯಿಗಳನ್ನು ಆಯ್ದುಕೊಳ್ಳುತ್ತಿದ್ದರು. ಇದನ್ನು ಗಮನಿಸಿದ್ದ ಖತರ್ನಾಕ್ ಕಳ್ಳರು ಅಜ್ಜಿಯನ್ನು ಮಾತಿನ ಬಲೆಗೆ ಬೀಳಿಸಿ ಒಳ್ಳೆಯ ಹುಡುಗರಂತೆ ನಟಿಸಿ ಅಜ್ಜಿಯ ಮನ ಗೆದ್ದಿದ್ದಾರೆ. ಇದನ್ನೆ ಬಂಡವಾಳ ಮಾಡಿಕೊಂಡ ಖದೀಮರು ಕೃತ್ಯವನ್ನು ಎಸಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.