ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಹಾಗೂ ಸಹಚರರು ಜೈಲು ಸೇರಿದ್ದಾರೆ. ಇತ್ತ ದರ್ಶನ್ ನೋಡಲು ನಿತ್ಯವು ಅಭಿಮಾನಿಗಳು ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸುತ್ತಿದ್ದಾರೆ. ಇದೀಗ ದರ್ಶನ್ ರನ್ನು ನೋಡಲೇ ಬೇಕು ಎಂದು ವಿಶೇಷ ಚೇತನ ಅಭಿಮಾನಿಯೋರ್ವಳು ಜೈಲಿನ ಮುಂದೆ ಊಟ ತಿಂಡಿ ಬಿಟ್ಟು ಹಟ ಹಿಡಿದು ಕುಳಿತಿದ್ದಾಳೆ.
ಬೆಂಗಳೂರಿನ ಜಾಲಹಳ್ಳಿ ಕ್ರಾಸ್ನ ನಿವಾಸಿ ಸೌಮ್ಯ ತನ್ನ ನೆಚ್ಚಿನ ನಟ ದರ್ಶನ್ ರನ್ನು ನೋಡಬೇಕೆಂದು ಹಠ ಹಿಡಿದಿದ್ದಾಳೆ. ಅಲ್ಲದೆ ದರ್ಶನ್ನನ್ನು ನೋಡುವ ತನಕ ಊಟ ಮಾಡುವುದಿಲ್ಲ ಎಂದಿದ್ದಾಳೆ. ಹೀಗಾಗಿ ಸೌಮ್ಯಳ ಪೋಷಕರು ಪರಪ್ಪನ ಅಗ್ರಹಾರಕ್ಕೆ ಕರೆ ತಂದಿದ್ದಾರೆ. ನಟ ದರ್ಶನ್ನ ಅಪ್ಪಟ ಅಭಿಮಾನಿಯಾಗಿರುವ ಸೌಮ್ಯ, ದರ್ಶನ್ ಜೈಲಿಗೆ ಹೋದ ದಿನದಿಂದ ಸರಿಯಾಗಿ ಊಟ ಮಾಡಿಲ್ಲ. ಜೈಲಿನಲ್ಲಿರುವ ದರ್ಶನ್ ಅವರನ್ನು ಭೇಟಿಯಾಗಬೇಕೆಂದು ಹಠ ಹಿಡಿದು ಕುಳಿತಿದ್ದಾಳಂತೆ.
2016 ರಲ್ಲಿ ಈ ಬಡ ಕುಟುಂಬಕ್ಕೆ ನಟ ದರ್ಶನ್ ಆಟೋವೊಂದನ್ನು ಕೊಡಿಸಿದ್ದರು. ಲಕ್ಷ್ಮೀ ಹಾಗೂ ರಂಗಸ್ವಾಮಿ ದಂಪತಿಯ ಪುತ್ರಿ ವಿಶೇಷ ಚೇತನ ಸೌಮ್ಯಳ ಪೋಷಣೆಗಾಗಿ ನಟ ದರ್ಶನ್ ಖುದ್ದು ಆಟೋ ಕೊಡಿಸಿದ್ದರು. ಹೀಗಾಗಿ ಇದೇ ಆಟೋದಲ್ಲಿ ಜೈಲಿಗೆ ಬಂದು ದರ್ಶನ್ ಭೇಟಿಗಾಗಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೆ ದರ್ಶನ್ ಭೇಟಿಗೆ ಅವರ ಕುಟುಂಬದವರು ಬರುತ್ತಿರುವ ಕಾರಣ ವಿಶೇಷ ಚೇತನ ಯುವತಿ ಭೇಟಿಗೆ ಅವಕಾಶವನ್ನು ಅಧಿಕಾರಿಗಳು ನಿರಾಕರಿಸಿದ್ದಾರೆ. ಇದರಿಂದ ಸೌಮ್ಯ ನೊಂದುಕೊಂಡಿದ್ದು ದರ್ಶನ್ ರನ್ನು ನೋಡಲೇ ಬೇಕು ಎಂದು ಹಠ ಹಿಡಿದಿದ್ದಾಳೆ.