ಬೇಸಿಗೆಯ ಸೂಪರ್ ಫುಡ್ಗಳ ಸಾಲಿಗೆ ಕಲ್ಲಂಗಡಿ ಹಣ್ಣು ಸಹ ಸೇರುತ್ತದೆ. ಅದರಲ್ಲೂ ಹೊರಗಿನ ಬಿಸಿ ವಾತಾವರಣಕ್ಕೆ ತಣ್ಣಗಿನ ಕಲ್ಲಂಗಡಿ ಹಣ್ಣು ಸ್ವಲ್ಪ ಹೆಚ್ಚೇ ತಂಪೆರೆಯುತ್ತದೆ. ಕಲ್ಲಂಗಡಿ ಹಣ್ಣನ್ನು ಕತ್ತರಿಸಿ ಹಾಗೆ ತಿನ್ನುವವರಿದ್ದರೆ ಚಿಟಿಕೆ ಉಪ್ಪನ್ನು ಹಾಕಿ ಸವಿಯುವವರನ್ನೂ ಕಾಣಬಹುದು.
ಆದರೆ ಮನೆಯ ಹಿರಿಯರು ಮಾತ್ರ ಸ್ವಲ್ಪ ಉಪ್ಪು ಸೇರಿಸಿಕೊಂಡು ತಿನ್ನಿ ಎಂದೇ ಹೇಳುತ್ತಾರೆ. ಕಲ್ಲಂಗಡಿ ಹಣ್ಣಿಗೆ ಉಪ್ಪು ಸೇರಿಸುವುದರಿಂದ ಏನೆಲ್ಲಾ ಪ್ರಯೋಜನಗಳು ಸಿಗುತ್ತವೆ? ಇಲ್ಲಿದೆ ಓದಿ.
ಕಲ್ಲಂಗಡಿ ಹಣ್ಣು ಮೂಲತಃ 90 ಪ್ರತಿಶತದಷ್ಟು ನೀರಿನಾಂಶ ಹೊಂದಿರುವ ಸಿಹಿಯಾದ ಹಣ್ಣು. ಅಂಗಡಿಯಿಂದ ಕೊಂಡು ತರುವ ಹಣ್ಣು ಕೆಲವೊಮ್ಮೆ ಸಂಪೂರ್ಣವಾಗಿ ಹಣ್ಣಾಗಿರುವುದಿಲ್ಲ. ಆಗ ನಾಲಿಗೆಗೆ ಸಿಹಿಯ ಹಿಂದೆಯೇ ಕಹಿ ಅಥವಾ ಸಪ್ಪೆಯ ಅನುಭವವಾಗುತ್ತದೆ. ಅದಕ್ಕೆ ಚಿಟಿಕೆ ಉಪ್ಪು ಸೇರಿಸಿದಾಗ ಸಪ್ಪೆ ಅನಿಸುವುದಿಲ್ಲ. ಕಾರಣ ಉಪ್ಪು ಸ್ವಾಭಾವಿಕವಾಗಿಯೇ ರುಚಿಯನ್ನು ಹೆಚ್ಚಿಸುವ ಗುಣಧರ್ಮವನ್ನು ಹೊಂದಿದೆ. ಸಿಹಿ ಸ್ವಲ್ಪ ಕಡಿಮೆ ಇರುವ ಹಣ್ಣು ಸಹ ರುಚಿ ಎನಿಸಲು ಪ್ರಾರಂಭವಾಗುತ್ತದೆ.̇̇
ಕಲ್ಲಂಗಡಿ ಹಣ್ಣಿಗೆ ಉಪ್ಪು ಸೇರಿಸಿದಾಗ ಬಾಯಲ್ಲಿ ನೀರೂರುವಷ್ಟು ಕೆಂಪಾಗಿ ಕಾಣಿಸುತ್ತದೆ. ಕಾರಣವೇನೆಂದರೆ, ತರಕಾರಿ, ಹಣ್ಣುಗಳಿಗೆ ಉಪ್ಪನ್ನು ಸೇರಿಸಿದಾಗ ಅದರಲ್ಲಿರುವ ನೀರಿನಾಂಶ ಹೊರಬರುತ್ತದೆ. ಏಕೆಂದರೆ ನೀರು ಹೆಚ್ಚಿನ ಸಾಂದ್ರತೆಯಿಂದ ಕಡಿಮೆ ಸಾಂದ್ರತೆಗೆ ಚಲಿಸುತ್ತದೆ. ಈ ಕ್ರಿಯೆಯಿಂದ ಉಪ್ಪುನ್ನು ಸೇರಿಸಿದಾಗ ಕಲ್ಲಂಗಡಿ ಹಣ್ಣಿನಲ್ಲಿ ಅಡಕವಾಗಿರುವ ನೀರಿನಾಂಶವು ಅದರ ಹೊರಪದರದ ಮೇಲೆ ಬರುತ್ತದೆ. ಆಗ ಅದು ರಸಭರಿತ, ಸಿಹಿಯಾದ ಹಣ್ಣಾಗುತ್ತದೆ. ಇಷ್ಟೇ
ಅಲ್ಲದೇ ಉಪ್ಪಿನಿಂದ ಅನೇಕ ಆರೋಗ್ಯ ಪ್ರಯೋಜನಗಳೂ ಇವೆ. ಸೋಡಿಯಂ ಎಂದು ಕರೆಯಲ್ಪಡುವ ಉಪ್ಪು ನೈಸರ್ಗಿಕವಾಗಿಯೇ ಎಲೆಕ್ಟ್ರೋಲೈಟ್ ಆಗಿದೆ. ಇದು ನಮ್ಮ ದೇಹವನ್ನು ಹೈಡ್ರೀಕರಿಸುತ್ತದೆ ಮತ್ತು ದೇಹದ ನೀರಿನಾಂಶದ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಕಲ್ಲಂಗಡಿ ಹಣ್ಣಿಗೆ ಉಪ್ಪು ಸೇರಿಸುವುದರಿಂದ ಹಣ್ಣಿನಲ್ಲಿರುವ ತೇವಾಂಶದ ಗುಣವನ್ನು ಹೆಚ್ಚಿಸುತ್ತದೆ.
ಹಾಗಾಗಿ ಬೇಸಿಗೆಯ ತಾಪಕ್ಕೆ ದೇಹವನ್ನು ಕಾಪಾಡಿಕೊಳ್ಳಲು ಇದು ಉಪಯುಕ್ತವಾಗಿದೆ. ಕಲ್ಲಂಗಡಿ ಹಣ್ಣಿಗೆ ಉಪ್ಪು ಸೇರಿಸಿ ತಿನ್ನುವುದು ಒಂದು ಬಗೆಯಾದರೆ, ಅದರಿಂದ ಜ್ಯೂಸ್ ಕೂಡಾ ತಯಾರಿಸಬಹುದು.