ಭಾಗಮಂಡಲದ ತ್ರಿವೇಣಿ ಸಂಗಮದ ಸಮೀಪ ಅಂದಾಜು 5 ಕೋಟಿ ರೂಪಾಯಿ ವೆಚ್ಚದಲ್ಲಿ ಶಾಸಕರಾದ ಎ ಎಸ್ ಪೊನ್ನಣ್ಣನವರ ಪ್ರಯತ್ನದಲ್ಲಿ ವಿಶೇಷ ಅನುದಾನದಲ್ಲಿ ಉದ್ಯಾನವನ ನಿರ್ಮಾಣ ಹಾಗೂ ಅಭಿವೃದ್ಧಿ ಕಾರ್ಯವನ್ನು ಇತ್ತೀಚಿಗೆ ನಡೆಸಲಾಗಿತ್ತು. ಕಳೆದು ವಾರ ಶಾಸಕರು ಭೇಟಿ ನೀಡಿ ಈ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದರು.
ಆದರೆ ನಿನ್ನೆ ಸುರಿದ ಭಾರಿ ಮಳೆಗೆ ತ್ರಿವೇಣಿ ಸಂಗಮ ಸಂಪೂರ್ಣವಾಗಿ ಭರ್ತಿಯಾಗಿ, ಅಭಿವೃದ್ಧಿ ನಡೆಸಲಾದ ಉದ್ಯಾನವನ ಸಂಪೂರ್ಣ ಜಲಾವೃತವಾಗಿದೆ.
ಭಾಗಮಂಡಲದಲ್ಲಿ ಒಂದೆರಡು ದಿನ ಇದೇ ರೀತಿ ಮಳೆ ಸುರಿದು ಈ ಉದ್ಯಾನವನದ ಮೇಲೆ ನೀರು ನಿಂತರೆ ಅಲ್ಲಿ ನೆಡಲಾದ ಎಲ್ಲಾ ಗಿಡಗಳು ಕೂಡ ಕೊಚ್ಚಿ ಹೋಗಿ ಕೆಸರು ಆವರಿಸಿ ಮಳೆ ನಿಂತ ನಂತರ ಪಿಂಡಪ್ರದಾನ ಮಾಡಲು ತ್ರಿವೇಣಿ ಸಂಗಮಕ್ಕೆ ತೆರಳುವವರಿಗೆ ತೀವ್ರ ಸ್ವರೂಪದ ತೊಂದರೆಯಾಗುವ ಸಂಭವಿದೆ ಎಂದು ಅಂದಾಜಿಸಲಾಗಿದೆ.
ಆದರೆ ಇದೀಗ ನೂತನ ಸರಕಾರ ಬಂದ ನಂತರ ಇಲ್ಲಿ ವಿವಿಧ ತಳಿಯ ಹೂ ಗಿಡಗಳನ್ನು ನೆಟ್ಟು, ಚಂದದ ದೀಪಗಳನ್ನು ಅಳವಡಿಸಿ, ನೆಲಹಾಸು ಅಲಂಕಾರಿಕ ವಸ್ತುಗಳು ಸುತ್ತ ಸ್ಟೀಲ್ ರಾಡ್ಗಳನ್ನೆಲ್ಲ ಹಾಕಿ ನೋಡುಗರಿಗೆ ಚಂದ ಕಾಣಿಸುವಂತೆ ಮಾಡಲಾಗಿತ್ತು. ಆದರೆ ಇದೀಗ ಇವೆಲ್ಲವೂ ಕೂಡ ನೀರಿಗೆ ಹೋಮ ಹಾಕಿದಂತಾಗಿದೆ.
ನೆಟ್ಟಿರುವ ಗಿಡಗಳೆಲ್ಲ ಕೊಳೆತು ಹೋಗುವ ಪರಿಸ್ಥಿತಿ, ವಿದ್ಯುತ್ ವೈರ್ ಗಳೆಲ್ಲ ತುಕ್ಕು ಹಿಡಿಯುವ ಪರಿಸ್ಥಿತಿ, ಮಳೆ ನೀರು ನಿಂತು ಕಲ್ಲಿನ ಮೇಲೆ ಪಾಚಿ ಕಟ್ಟಿ ನಡೆದಾಡಲು ಆಗದಿರುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂಬ ಆತಂಕವನ್ನು ಸೃಷ್ಟಿಸಿದೆ. ಜೂನ್ ತಿಂಗಳಲ್ಲಿನ ಆರಿದ್ರ ಮಳೆಗೆ ಈ ರೀತಿ ಆದರೆ ಮುಂದೆ ಬೀಳುವ ಮಳೆಗೆ ಏನಾಗಬಹುದು ಎಂಬ ಜಿಜ್ಞಾಸೆ ಎಲ್ಲರಲ್ಲೂ ಕಾಡುತ್ತಿದೆ .ಈ ಕಾಮಗಾರಿ ಅವೈಜ್ಞಾನಿಕ ಎಂದು ಹಲವರು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಮಳೆ ನಿಂತ ನಂತರ ಅಭಿವೃದ್ಧಿಯ ಅಸಲಿ ಬಣ್ಣ ಬಯಲಾಗಬಹುದಾಗಿದೆ.