ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಗೆ ಅಲ್ಲಿನ ಊಟ ಸೇರುತ್ತಿಲ್ಲ. ಹೊರಗಿದ್ದ ವೇಳೆ ಹೆಚ್ಚಾಗಿ ಮಾಂಸಾಹಾರವನ್ನೇ ಸೇವಿಸುತ್ತಿದ್ದ ದಾಸನಿಗೆ ಜೈಲಿನಲ್ಲಿ ನೀಡುವ ಅನ್ನ, ತರಕಾರಿ ಸಾರು ಸೇರುತ್ತಿಲ್ಲ. ಇದರಿಂದ ಬೇಸರಗೊಂಡಿದ್ದ ದರ್ಶನ್ ಗೆ ಶುಕ್ರವಾರ (ಜೂನ್ 28) ರಾತ್ರಿ ಚಿಕನ್ ಸಾಂಬಾರ್, ಮುದ್ದೆ ಹಾಗೂ ಅನ್ನವನ್ನು ನೀಡಲಾಗಿದೆ.
ಜೈಲಿನ ಅನ್ನ-ಸಾಂಬಾರ್ ತಿಂದು ಬಸವಳಿದಿದ್ದ ದರ್ಶನ್ ಅವರಿಗೆ ಚಿಕನ್ ಸಾಂಬಾರ್ ನೀಡಿರುವುದು ತುಸು ಸಮಾಧಾನ ತಂದಿದೆ. ಮುದ್ದೆ, ಚಿಕನ್ ಸಾಂಬಾರ್ ಸೇವಿಸಿದ ದರ್ಶನ್ ತಡವಾಗಿ ನಿದ್ದೆಗೆ ಜಾರಿದ್ದಾರೆ.
ಶನಿವಾರ (ಜೂನ್ 29) ಬೆಳಗ್ಗೆ 6 ಗಂಟೆಗೆ ಎದ್ದ ದರ್ಶನ್, ಕೆಲಹೊತ್ತು ಜೈಲಿನ ಕೊಠಡಿಯಲ್ಲಿಯೇ ವಾಕಿಂಗ್ ಮಾಡಿದರು. ಇದರ ಮಧ್ಯೆಯೇ, ಪದೇಪದೆ ಅನಾರೋಗ್ಯದ ನೆಪ ಹೇಳಿ ಜೈಲು ಆಸ್ಪತ್ರೆ ಕಡೆ ಸುಳಿಯುತ್ತಿದ್ದು, ಜೈಲಧಿಕಾರಿಗಳಿಗೆ ನಟ ತಲೆನೋವಾಗಿದ್ದಾರೆ. ಹೊಟ್ಟೆ ನೋವು, ತಲೆನೋವು ಸೇರಿ ಹಲವು ನೆಪಗಳನ್ನು ಹೇಳಿಕೊಂಡು ಅವರು ಆಸ್ಪತ್ರೆಗೆ ಹೋಗುತ್ತಿದ್ದಾರೆ. ಇದರ ಮಧ್ಯೆಯೇ, ನಟ ದರ್ಶನ್ ಅವರನ್ನು ನೋಡಲು ಜೈಲಿನಲ್ಲಿರುವ ಕೈದಿಗಳು ಹರಸಾಹಸ ಪಡುತ್ತಿದ್ದಾರೆ ಎನ್ನಲಾಗಿದೆ.
ಸ್ನೇಹಿತೆ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದಾನೆ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಸದ್ಯ ಪ್ರಕರಣದಲ್ಲಿ 17 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು ಪೊಲೀಸರು ಸಾಕಷ್ಟು ಮಾಹಿತಿ ಕಲೆ ಹಾಕಿದ್ದಾರೆ.