ಅಮೆರಿಕ ಅಧ್ಯಕ್ಷ ಜೋ ಬೈಡನ್ & ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಮಾತಿನ ಚಕಮಕಿ ನಡೆದಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಇನ್ನೇನು ಕೆಲ ದಿನಗಳು ಬಾಕಿ ಇರುವಾಗಲೇ ಇಬ್ಬರೂ ವಾಕ್ ಸಮರ ಶುರು ಮಾಡಿದ್ದಾರೆ.
ಅಂದಹಾಗೆ ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಮಯದಲ್ಲಿ, ಅಭ್ಯರ್ಥಿಗಳನ್ನು ಟಿವಿ ಪರದೆ ಮುಂದೆ ನಿಲ್ಲಿಸಿ ಮುಖಾಮುಖಿ ಚರ್ಚೆಗೆ ಬಿಡುವುದು ಸಂಪ್ರದಾಯ. ಅದೇ ರೀತಿ ಇದೀಗ ಅಮೆರಿಕ ಅಧ್ಯಕ್ಷ ಬೈಡನ್ & ಟ್ರಂಪ್ ನಡುವೆ ಮಾತಿನ ಫೈಟಿಂಗ್ ನಡೆದಿದ್ದು, ಇಬ್ಬರ ಮಾತುಕತೆ ಫುಲ್ ವೈರಲ್ ಆಗುತ್ತಿದೆ. 2ನೇ ಬಾರಿ ಅಧ್ಯಕ್ಷರಾಗಿ ಆಯ್ಕೆ ಆಗುವ ಹುಮ್ಮಸ್ಸು ಹೊಂದಿರುವ ಡೊನಾಲ್ಡ್ ಟ್ರಂಪ್ ಇದೀಗ ಬೈಡನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಜೋ ಬೈಡನ್ ಡೆಮಾಕ್ರಟಿಕ್ ಪಕ್ಷದಿಂದ ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿ ಆಗಿ ಕಣಕ್ಕಿಳಿದರೆ ಮತ್ತೊಂದು ಕಡೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಡೊನಾಲ್ಡ್ ಟ್ರಂಪ್ ಅಖಾಡಕ್ಕೆ ಇಳಿದಿದ್ದಾರೆ. ಇಬ್ಬರ ನಡುವೆ ಭರ್ಜರಿ ಮಾತಿನ ಮಹಾಯುದ್ಧ ನಡೆಯುತ್ತಿದೆ. ಇದೀಗ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳ ಚರ್ಚೆ ಸಮಯದಲ್ಲಿ ಹಲವು ವಿಚಾರಗಳು ಚರ್ಚೆ ಆಗಿವೆ. ಅಲ್ಲದೆ ಇಬ್ಬರೂ ಒಬ್ಬರ ಮೇಲೆ ಮತ್ತೊಬ್ಬರು ಆರೋಪ, ಪ್ರತ್ಯಾರೋಪಗಳನ್ನ ಮಾಡಿದ್ದಾರೆ.
ಬೈಡನ್ & ಟ್ರಂಪ್ ಅಮೆರಿಕ ಆರ್ಥಿಕ ಪರಿಸ್ಥಿತಿ & ಅಧೋಗತಿ, ಗಡಿ ವಿವಾದವೂ ಸೇರಿದಂತೆ ವಿದೇಶಾಂಗ ನೀತಿ, ಗರ್ಭಪಾತ ಕುರಿತಾದ ಕಾನೂನು, ರಾಷ್ಟ್ರೀಯ ಭದ್ರತೆ ಬಗ್ಗೆ ಭರ್ಜರಿ ಮಾತಿನ ತಿಕ್ಕಾಟ ನಡೆಸಿದರು. ಹಾಗೇ ಈ ವಿಚಾರದಲ್ಲಿ ಬೈಡನ್ ಆಡಳಿತದ ಬಗ್ಗೆ ಟ್ರಂಪ್ ಹಲವು ಆರೋಪ ಮಾಡಿದ್ದಾರೆ.
ಒಂದು ಹಂತದಲ್ಲಿ ಡೊನಾಲ್ಡ್ ಟ್ರಂಪ್ & ಜೋ ಬೈಡನ್ ನಡುವಿನ ಮಾತು ಕೈಮೀರಿ ಹೋಗಿತ್ತು. ಅಲ್ಲದೆ ಇಬ್ಬರೂ ಒಬ್ಬರನ್ನು ಮತ್ತೊಬ್ಬರು ವೈಯಕ್ತಿಕವಾಗಿ ಟೀಕೆ ಮಾಡಿ ಬೈದಾಡಿದರು. ಇಬ್ಬರೂ ಪರಸ್ಪರರನ್ನು ‘ಸುಳ್ಳುಗಾರ’ & ‘ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಅಧ್ಯಕ್ಷ’ ಎಂದು ಆರೋಪ ಮಾಡಿದ್ದಾರೆ. ಒಟ್ಟಾರೆ 90 ನಿಮಿಷ ನಡೆದಿದೆ ಈ ಚರ್ಚೆ. ಅಮೆರಿಕದ ಮತದಾರರ ಮೇಲೆ ಈ ಚರ್ಚೆಯ ಅಂಶಗಳು & ವಿಚಾರಗಳು ಕೂಡ ಭಾರಿ ಪ್ರಭಾವ ಬೀರುತ್ತವೆ. ಹೀಗಾಗಿ ಡೊನಾಲ್ಡ್ ಟ್ರಂಪ್ & ಜೋ ಬೈಡನ್ ಈ ಚರ್ಚೆಯಲ್ಲಿ ಮಾತನಾಡಿದ ವಿಚಾರಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.