ಬೆಂಗಳೂರು: 34 ವರ್ಷಗಳ ಪೊಲೀಸ್ ಸೇವೆಗೆ ಅಂತ್ಯ ಹಾಡಿದ ಡಿಜಿಪಿ ಕಮಲ್ ಪಂತ್, ಹೌದು ರಾಜ್ಯ ಅಗ್ನಿಶಾಮಕ ಇಲಾಖೆಯ ಪೊಲೀಸ್ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ ಹಿರಿಯ ಐಪಿಎಸ್ ಅಧಿಕಾರಿ ಕಮಲ್ ಪಂತ್ ಅವರು ಇಂದು ನಿವೃತ್ತಿಯಾಗಿದ್ದಾರೆ. 1990ರ ಬ್ಯಾಚ್ನ ಅಧಿಕಾರಿಯಾಗಿರುವ ಪಂತ್, ದಕ್ಷತೆ,
ಪ್ರಾಮಾಣಿಕತೆ ಹಾಗೂ ಇಲಾಖೆಯಲ್ಲಿ ಹಲವು ನೂತನ ಸುಧಾರಣೆಗಳಿಗೆ ಕಾರಣೀಭೂತರಾಗಿದ್ದರು. ಉತ್ತರಾಖಂಡ್ ಮೂಲದ ಇವರು, ದೆಹಲಿ ವಿಶ್ವವಿದ್ಯಾಲಯದಲ್ಲಿ ಎಂಎಸ್ಸಿ ಪದವಿ ಪಡೆದು, ನಂತರ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕರ್ನಾಟಕ ಕೇಡರ್ನ ಐಪಿಎಸ್ ಸೇವೆ ಆರಂಭಿಸಿದ್ದರು.
1994ರಲ್ಲಿ ಶಿವಮೊಗ್ಗದ ಭದ್ರಾವತಿಯಲ್ಲಿ ಎಎಸ್ಪಿಯಾಗಿ ವೃತ್ತಿ ಜೀವನ ಪ್ರಾರಂಭಿಸಿದ್ದರು. ಎಸ್ಪಿ, ಡಿಐಜಿ, ಐಜಿಪಿಯಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸಿಬಿಐ, ರಾಜ್ಯ ಪೊಲೀಸ್ ಇಲಾಖೆಯ ಎಡಿಜಿಪಿ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಹಾಗೂ ಲೋಕಾಯುಕ್ತದಲ್ಲಿ ಕೆಲಸ ಮಾಡಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಇವರ ಸೇವೆಯನ್ನು ಶಾಘ್ಲಿಸಿ ರಾಷ್ಟ್ರಪತಿ ಹೆಸರಿನ ಜೀವಮಾನ ಪೊಲೀಸ್ ಪದಕ ಸೇರಿ ಇನ್ನಿತರ ಪದಕಗಳು ಹಾಗೂ ಗೌರವಗಳಿಗೆ ಭಾಜನರಾಗಿದ್ದಾರೆ.